HEALTH TIPS

ಹೊಣೆಗಾರಿಕೆ ನಿಗದಿ: ಜೆನ್‌-ಆಲ್ಫಾ ಮುನ್ನೆಲೆಗೆ

ನವದೆಹಲಿ: ಇಂದಿನ ಶಿಕ್ಷಣ ವ್ಯವಸ್ಥೆ ವಿರುದ್ಧದ ವಿದ್ಯಾರ್ಥಿಗಳ ಹೋರಾಟವು ದೆಹಲಿಯ ಜಂತರ್‌ ಮಂತರ್‌ ಮೂಲಕ ಹಳ್ಳಿಗಳನ್ನು ಪ್ರವೇಶಿಸಿದೆ. ತಮ್ಮ ಸಮಸ್ಯೆಗಳ ಬಗ್ಗೆ, ತಾವು ನಡೆಸುತ್ತಿರುವ ಹೋರಾಟದ ಬಗ್ಗೆ ಜೆನ್‌-ಝೀಗಳಿಗೆ ಇದ್ದ ಸ್ಪಷ್ಟತೆ ಕುರಿತು ಚರ್ಚೆ ನಡೆಯುತ್ತಿದ್ದ ಹೊತ್ತಿನಲ್ಲಿಯೇ ವಿಚಾರಸ್ಪಷ್ಟತೆಯಿಂದ ಜೆನ್‌-ಆಲ್ಫಾಗಳು ಕೂಡ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ.

2010ರಿಂದ 2024ರ ಅವಧಿಯಲ್ಲಿ ಜನಿಸಿದವರನ್ನು ಜೆನ್‌-ಆಲ್ಫಾ ಎನ್ನಲಾಗುತ್ತದೆ.


ಶಾಲೆಯ ಪುರುಷ ಮುಖ್ಯಶಿಕ್ಷಕರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ, ಜಾತಿ ತಾರತಮ್ಯ ನಡೆಸುತ್ತಿದ್ದಾರೆ, ಶಾಲೆಯಲ್ಲಿ ಶೌಚಾಲಯ ಇಲ್ಲ, ಶಿಕ್ಷಕರಿಲ್ಲ, ಕಟ್ಟಡ ಶಿಥಿಲಗೊಂಡಿದೆ... ಹೀಗೆ ಸರ್ಕಾರಿ ಶಾಲೆಯ ಮಕ್ಕಳು ಸರ್ಕಾರದ ವಿರುದ್ಧ ಹಲವು ಕಾರಣಗಳಿಂದಾಗಿ ಪ್ರತಿಭಟಿಸುತ್ತಿದ್ದಾರೆ.

ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಶಾಲಾ ಮಕ್ಕಳು ಪ್ರತಿಭಟಿಸಿದ ಹಲವು ಘಟನೆಗಳು ವರದಿಯಾಗಿವೆ. ಸರ್ಕಾರಿ ಅಧಿಕಾರಿ ಅಥವಾ ಜನಪ್ರತಿನಿಧಿಗಳ ಮುಂದೆ ಧೈರ್ಯದಿಂದ ನಿಂತು ತಮ್ಮ ಸಮಸ್ಯೆಗಳನ್ನು ಅವರ ಮುಂದಿಡುವ ಪರಿಯ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಇಂಥ ಹಲವು ವಿಡಿಯೊಗಳು ಜಾಲತಾಣಗಳಲ್ಲಿ ಇವೆ.

ಉತ್ತರ ಪ್ರದೇಶದ ಘಟನೆಗಳು

ಜುಲೈ 28: ಕಿಶನ್‌ಪುರದ ಸರ್ವೋದಯ ಇಂಟರ್‌ ಕಾಲೇಜಿನಲ್ಲಿ 6ರಿಂದ 12ನೇ ತರಗತಿಯ ಸುಮಾರು 1,800 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕುಡಿಯವ ನೀರಿಲ್ಲ. ಸ್ವಚ್ಛ ಶೌಚಾಲಯವಿಲ್ಲ. ವಿದ್ಯುತ್‌ ವ್ಯವಸ್ಥೆ ಇಲ್ಲ- ಇವು ಅವರ ಸಮಸ್ಯೆಗಳು. ಜೊತೆಗೆ, ಅಂಕಪಟ್ಟಿ ನೀಡಲು, ಶಾಲಾ ದಾಖಲಾತಿ ನೀಡಲು ಆಡಳಿತ ಮಂಡಳಿಯವರು ಹಣ ಕೇಳುತ್ತಿದ್ದಾರೆ ಎಂದೂ ಆರೋಪಿಸಿದರು. ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾ ಶಾಲಾ ಪರೀಕ್ಷಕ ಲಿಖಿತವಾಗಿ ಪತ್ರ ನೀಡಿದ ಮೇಲೆಯೇ ಪ್ರತಿಭಟನೆ ಕೈಬಿಟ್ಟರು.

ಆಗಸ್ಟ್‌ 14: ಶಿಕ್ಷಕರ ಕೊರತೆ ಕುರಿತು ಲಖನೌನ ಜೈ ಪ್ರಕಾಶ್‌ ನಾರಾಯಣ ಸರ್ವೋದಯ ವಿದ್ಯಾಲಯ ಮಕ್ಕಳು ರಸ್ತೆ ತಡೆ ನಡೆಸಿದರು. ಪೊಲೀಸರು ಮತ್ತು ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇಲೆ ಮಕ್ಕಳು ಶಾಲೆಗೆ ಹಿಂದಿರುಗಿದರು. ಮೂರು ದಿನ ಕಳೆದರೂ ಸಮಸ್ಯೆ ಬಗೆಹರಿಯದಿದ್ದಕ್ಕೆ ವಿದ್ಯಾರ್ಥಿನಿಯರು ಸೇರಿಕೊಂಡು ಭಾರಿ ಮಳೆ ಮಧ್ಯೆಯೂ ಮತ್ತೊಮ್ಮೆ ರಸ್ತೆ ತಡೆದರು.

ಆಗಸ್ಟ್‌ 20: ಮುಖ್ಯೋಪಾಧ್ಯಾಯರು ಮಕ್ಕಳಲ್ಲಿ ಜಾತಿ ತಾರತಮ್ಯ ಮಾಡುತ್ತಾರೆ ಎಂದು ಆರೋಪಿಸಿ ಗುಗ್ರಾಪುರದ ಪಿಎಂಶ್ರೀ ಸಂಯುಕ್ತ ಶಾಲೆ ಮಕ್ಕಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು. ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಭರವಸೆ ನೀಡಿದ ಬಳಿಕ, ಪ್ರತಿಭಟನೆ ಅಂತ್ಯಗೊಂಡಿತು.

ಮಧ್ಯ ಪ್ರದೇಶ - ‌ಆಗಸ್ಟ್‌ 21: 'ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆ. ರಾಜ್ಯದಲ್ಲಿ ಸುಮಾರು 25 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ' ಎಂದು ಆರೋಪಿಸಿ ರಾಜ್ಯದ 36 ಜಿಲ್ಲೆಗಳ ಜೆನ್‌-ಝೀ ಮತ್ತು ಜೆನ್‌-ಆಲ್ಫಾ ವಿದ್ಯಾರ್ಥಿಗಳು ಭೋಪಾಲ್‌ನಲ್ಲಿ ಪ್ರತಿಭಟನೆ ನಡೆಸಿದರು. 'ಶಾಲೆಗಳನ್ನು ಉಳಿಸಿ' ಅಭಿಯಾನ ಕೈಗೊಳ್ಳಲಾಗುವುದು ಮತ್ತು ಧರಣಿ ಕೂರಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.

ಬಾಲಕ ವಶಕ್ಕೆ- ಬಿಡುಗಡೆ

'ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ರಾಜೀನಾಮೆ ನೀಡಬೇಕು. ಈ ಭ್ರಷ್ಟಾಚಾರಿ ಸರ್ಕಾರವನ್ನು ಕಿತ್ತೆಸೆಯುತ್ತೇವೆ. ಜೈಲಿಗೆ ಹಾಕಿದರೆ, ಹಾಕಲಿ. ಗುಂಡು ಹಾರಿಸಿದರೆ ನಾನೇ ಮೊದಲು ನಿಲ್ಲುತ್ತೇನೆ. ವಿದ್ಯಾರ್ಥಿಗಳಿಗೆ ಯಾಕೆ ಹೊಡೆದಿರಿ ಎಂದು ನಾನು ಎಸ್‌ಪಿ ಅವರಲ್ಲಿ ಕೇಳಿದೆ. ಅವರು ಉತ್ತರ ಕೊಡಲಿಲ್ಲ. ನನ್ನನ್ನು ಪೊಲೀಸರಿಗೆ ಒಪ್ಪಿಸಿದರು. ಇದು ಕಾನೂನು ಪ್ರಕಾರ ತಪ್ಪು. ನಮ್ಮ ಅಣ್ಣಂದಿರು, ಅಕ್ಕಂದಿರು ಬಿಪಿಎಸ್‌ಸಿ ಪರೀಕ್ಷೆ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದೆ ನಾನು ಪರೀಕ್ಷೆ ಬರೆಯುವಾಗಲೂ ಹೀಗೆ ಆಗಬಹುದು. ಅದಕ್ಕೇ ನಾನು ಇಲ್ಲಿಗೆ ಬಂದಿದ್ದೇನೆ....'

-ಪಟ್ನಾದ ಕೊಳೆಗೇರಿ ಪ್ರದೇಶದ 6 ವರ್ಷದ ಆದಿತ್ಯ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಪರಿ ಇದು. ಈತನ ತಾಯಿ ಮನೆ ಮನೆಗೆ ತೆರಳಿ ಮನೆಗೆಲಸ ಮಾಡಿದರೆ, ತಂದೆ, ದಿನಗೂಲಿ ನೌಕರ.

ಬಿಹಾರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿನ ಸಮಸ್ಯೆಗಳ ಬಗ್ಗೆ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಈತನೂ ಭಾಗಿಯಾಗಿದ್ದ. ಈತನನ್ನು ಪೊಲೀಸರು ಅವರ ವಾಹನದವರೆಗೆ ಕರೆದುಕೊಂಡು ಹೋಗುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೇಶದಾದ್ಯಂತ ಈ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

'ಸುರಕ್ಷತೆಗಾಗಿಯೇ ಠಾಣೆಯಲ್ಲಿ ಆತನನ್ನು ಇಟ್ಟುಕೊಂಡಿದ್ದೆವು. ಮಗನನ್ನು ಎಚ್ಚರದಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಹೇಳಿದ್ದೇವೆ' ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries