ಶಿಮ್ಲಾ (PTI): 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ ಪ್ರಕರಣ ದಾಖಲಿಸಬೇಕು' ಎಂದು ಬಿಜೆಪಿ ಒತ್ತಾಯಿಸಿದೆ. 
ಪಕ್ಷದ ಮುಖ್ಯ ವಕ್ತಾರ ರಾಕೇಶ್ ಜಮ್ವಾಲ್, ಶಾಸಕರಾದ ಸತ್ಪಾಲ್ ಸಿಂಗ್ ಸತ್ತಿ, ಡಿ.ಎಸ್.ಠಾಕೂರ್ ಮತ್ತು ದಿಲೀಪ್ ಠಾಕೂರ್ ಅವರನ್ನೊಳಗೊಂಡ ನಿಯೋಗವು ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಶಿಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೋಮವಾರ ದೂರು ನೀಡಿದೆ.
'ಖೇರಾ ಅವರು ಸಾರ್ವಜನಿಕವಾಗಿ ಶಾ ಅವರ ಯೋಗ್ಯತೆ ಬಗ್ಗೆ ಟೀಕೆ ಮಾಡಿದ್ದಲ್ಲದೆ, 'ಕುಬ್ಜ, ದೇಶಭ್ರಷ್ಟ ಮತ್ತು ಗಡೀಪಾರು' ಎಂಬೆಲ್ಲ ಪದಗಳನ್ನು ಬಳಸಿದ್ದಾರೆ' ಎಂದು ಜಮ್ವಾಲ್ ಆರೋಪಿಸಿದ್ದಾರೆ.
'ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ಟೀಕೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗಗಳಾಗಿವೆ. ಆದರೆ, ಕೇಂದ್ರ ಗೃಹ ಸಚಿವರ ವಿರುದ್ಧ ಇಂತಹ ಭಾಷೆ ಬಳಸುವುದು ರಾಜಕೀಯ ಸಭ್ಯತೆಯ ಗಡಿಗಳನ್ನು ಮೀರುತ್ತದೆ. ಸಾರ್ವಜನಿಕ ಚರ್ಚೆಯ ಗುಣಮಟ್ಟವನ್ನು ಕುಗ್ಗಿಸುತ್ತದೆ' ಎಂದು ಹೇಳಿದ್ದಾರೆ.
'ಖೇರಾ ಅವರ ಹೇಳಿಕೆಗಳಿಗೆ ಸಂಬಂಧಿಸಿದ ವಿಡಿಯೊಗಳು, ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಸೇರಿದಂತೆ ವಿದ್ಯುನ್ಮಾನ ಸಾಕ್ಷ್ಯಗಳನ್ನು ಒದಗಿಸಲಾಗುವುದು. ಅವುಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ಲಿಖಿತ ದೂರು ನೀಡಲಾಗಿದೆ' ಎಂದು ತಿಳಿಸಿದ್ದಾರೆ.


