ನವದೆಹಲಿ: ಜೆನ್ ಝೀ ವಿಚಾರದಲ್ಲಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
ಅಲ್ಲದೇ, ಆರ್‌ಎಸ್‌ಎಸ್ ಸಲಹೆಗಳನ್ನು ಬಿಜೆಪಿ ಆಲಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.

ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದೀಪ್ಕೆ, 'ಜೆನ್ ಝೀಗಳು ದೇಶವಿರೋಧಿಗಳಲ್ಲ. ಅವರ ಕಳವಳಗಳು ನಿಜವಾದವು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳುತ್ತಾರೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಜೆನ್ ಝೀಗಳನ್ನು 'ವೈರಸ್' ಎಂದು ಕರೆಯುತ್ತಾರೆ. ಹೀಗಾಗಿ, ಬಿಜೆಪಿ ಎಲ್ಲೋ ಒಂದು ಕಡೆ ಭಾಗವತ್ ಅವರ ಮಾತುಗಳನ್ನು ಕೇಳುವುದನ್ನು ನಿಲ್ಲಿಸಿದೆ' ಎಂದು ಟೀಕಿಸಿದ್ದಾರೆ.
'ಮೋಹನ್ ಭಾಗವತ್ ನಿಮ್ಮ ಮಾರ್ಗದರ್ಶಕರು. ಮೊದಲು ಅವರ ಮಾತನ್ನು ಕೇಳಿ. ಅದು ನಿಮಗೇ ಒಳ್ಳೆಯದು' ಎಂದು ಅವರು ಬಿಜೆಪಿಗೆ ಸಲಹೆ ನೀಡಿದ್ದಾರೆ.
ಮುಂದುವರಿದು, 'ಕೇಂದ್ರದಲ್ಲಿ ಕೇವಲ 12 ವರ್ಷ ಅಧಿಕಾರದಲ್ಲಿರುವ ನೀವು ಆರ್‌ಎಸ್‌ಎಸ್ ಮಾತನ್ನು ಕೇಳದಷ್ಟು ದೊಡ್ಡವರಾಗಿದ್ದೀರಾ? ಈಗಷ್ಟೇ ದೊಡ್ಡ ಜವಾಬ್ದಾರಿ ವಹಿಸಿಕೊಂಡಿರುವ ನಿತಿನ್ ನವೀನ್ ಅವರೂ ಆರ್‌ಎಸ್‌ಎಸ್ ಮಾತು ಕೇಳುತ್ತಿಲ್ಲವೇ?' ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.
'ನೀವು(ಬಿಜೆಪಿ) ನಮ್ಮನ್ನು ದೇಶವಿರೋಧಿಗಳು, ಪರಾವಲಂಬಿಗಳು, ವೈರಸ್‌ಗಳು ಎಂದು ಕರೆಯುತ್ತಿದ್ದೀರಿ. ನಾವು ಭಯೋತ್ಪಾದಕರ ಬಿ ತಂಡ ಎಂದು ಕೂಡ ಹೇಳುತ್ತೀರಿ' ಎಂದು ಅವರು ಆರೋಪಿಸಿದ್ದಾರೆ.
'ನೀವು ಹೇಳಿದ್ದನ್ನು ಒಪ್ಪಿಕೊಂಡರೆ ಮಾತ್ರ ನಾವು ದೇಶಭಕ್ತರು; ಇಲ್ಲವಾದರೆ ದೇಶದ್ರೋಹಿಗಳು ಎಂಬುದು ನಿಮ್ಮ ನಿಲುವು. ಇದು ನನ್ನ ದೇಶ. ನನಗೆ ನನ್ನದೇ ಆದ ದೃಷ್ಟಿಕೋನಗಳಿವೆ. ಅದನ್ನು ಪ್ರಶ್ನಿಸಲು ನೀವು ಯಾರು? ಸರ್ಕಾರ ನಿಮ್ಮದಾಗಿರಬಹುದು, ಆದರೆ ದೇಶ ನಿಮ್ಮದಲ್ಲ. ದೇಶ ನಮ್ಮದು' ಎಂದು ದೀಪ್ಕೆ ಕಿಡಿಕಾರಿದ್ದಾರೆ.


