ನವದೆಹಲಿ: ಹೊಸ ಜನಗಣತಿಯ ಬಳಿಕ ನಡೆಯಲಿದೆ ಎಂದು ನಿರೀಕ್ಷಿಸಲಾಗಿರುವ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಕಳವಳ ವ್ಯಕ್ತಪಡಿಸಿದ್ದಾರೆ. ಜನಸಂಖ್ಯೆ ಆಧರಿಸಿ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ರಾಜ್ಯಗಳ ಮತದಾರರ ಮೌಲ್ಯ ನಗಣ್ಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕ ಸ್ವಾತಂತ್ರ್ಯ ಘೋಷಣೆಯ 250ನೇ ವಾರ್ಷಿಕೋತ್ಸವದ ಅಂಗವಾಗಿ ಕೇರಳ ಹೈಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಅಮೆರಿಕದ ಸಾಂವಿಧಾನಿಕ ಅನುಭವ ಮತ್ತು ಭಾರತದ ಮೇಲಿನ ಅದರ ಪ್ರಸ್ತುತತೆ' ಕುರಿತು ಮಾತನಾಡಿದ ಅವರು, ಕ್ಷೇತ್ರ ಪುನರ್ವಿಂಗಡಣೆ ವಿಷಯದ ಬಗ್ಗೆಯೂ ಪ್ರಸ್ತಾಪಿಸಿದರು.
ಅಮೆರಿಕ ಸ್ವಾತಂತ್ರ್ಯ ಘೋಷಣೆಯಲ್ಲಿ ಪ್ರತಿಪಾದಿಸಿರುವ ಜನರ ಒಪ್ಪಿಗೆಯೊಂದಿಗೆ ಸರಕಾರದ ಆಡಳಿತದ ತತ್ವದ ಕುರಿತು ಮಾತನಾಡಿದ ಅವರು, ಭಾರತದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಸಂಖ್ಯೆಯನ್ನು ಜನಸಂಖ್ಯೆಯೊಂದಿಗೆ ಜೋಡಿಸಿರುವುದಕ್ಕೆ ಹೋಲಿಕೆ ಮಾಡಿದರು.
ಜನಪ್ರತಿನಿಧಿಗಳ ಸಂಖ್ಯೆಯನ್ನು ನಿರ್ಧರಿಸಲು 1971ರ ಜನಗಣತಿಯನ್ನು ಆಧಾರವಾಗಿರಿಸಲಾಗಿತ್ತು ಎಂದು ನ್ಯಾ. ಜೋಸೆಫ್ ಹೇಳಿದರು. ಹೊಸ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಸುವ ಕುರಿತು ವ್ಯಕ್ತವಾಗುತ್ತಿರುವ ಕಳವಳಗಳನ್ನೂ ಅವರು ವಿವರಿಸಿದರು.
'ಈಗ ಅದನ್ನು ಮಾಡಲು ಹೊರಟರೆ, ನಿರ್ದಿಷ್ಟವಾಗಿ ದಕ್ಷಿಣ ರಾಜ್ಯಗಳಲ್ಲಿ ಜನಗಣತಿ ನಡೆಸಿ, ಬಳಿಕ ಜನಪ್ರತಿನಿಧಿಗಳ ಸಂಖ್ಯೆಯನ್ನು ನಿಗದಿಪಡಿಸಿದರೆ, ಸಂಪೂರ್ಣವಾಗಿ ಅಸ್ತವ್ಯಸ್ತ, ಅಸಮತೋಲಿತ ಹಾಗೂ ಅಸಮರ್ಪಕ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಗ ಉತ್ತರ ರಾಜ್ಯದ ಮತದಾರರಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳ ಮತದಾರರ ಮೌಲ್ಯ ನಗಣ್ಯವಾಗಲಿದೆ' ಎಂದು ಅವರು ಎಚ್ಚರಿಸಿದರು.
ಮತದಾರರ ಮೌಲ್ಯ ಕುಸಿದರೆ ದಕ್ಷಿಣ ರಾಜ್ಯಗಳ ಜನರ ಸಾಮರ್ಥ್ಯದ ಮೇಲೂ ಪರಿಣಾಮ ಉಂಟಾಗಲಿದೆ. ಇದರಿಂದ ದಕ್ಷಿಣ ರಾಜ್ಯಗಳು ಸಂಸತ್ತಿನಲ್ಲಿ ಅರ್ಥಪೂರ್ಣ ಧ್ವನಿಯನ್ನು ಕಳೆದುಕೊಳ್ಳಲಿವೆ ಎಂದು ಅವರು ವಿವರಿಸಿದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದೂ ಅವರು ಕರೆ ನೀಡಿದರು.
'ನಗಣ್ಯ ಮೌಲ್ಯ ಎಂದರೆ ಸಂಸತ್ತಿನ ಕಲಾಪವೂ ವಾಸ್ತವವಾಗಿ ನಮಗೆ ನಗಣ್ಯ ಎಂದರ್ಥ. ಹೀಗಾಗಿ, ನಾವು ಕ್ಷೇತ್ರ ಪುನರ್ವಿಂಗಡಣೆಗೆ ಸಮ್ಮತಿ ಸೂಚಿಸುತ್ತಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ನಾನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಇದೇ. ಹೀಗಾಗಿ, ಪರಿಹಾರವೊಂದನ್ನು ಕಂಡುಕೊಳ್ಳಲೇಬೇಕು' ಎಂದು ಅವರು ಆಗ್ರಹಿಸಿದರು.
ಈ ವಿಚಾರವನ್ನು ಜನರ ಒಪ್ಪಿಗೆಯ ಮೂಲಕ ಸರಕಾರಕ್ಕೆ ಯಥಾರ್ಥತೆ ದೊರೆಯುವ ಪ್ರಜಾತಾಂತ್ರಿಕ ತತ್ವಗಳೊಂದಿಗೆ ಅವರು ಹೋಲಿಸಿದರು.
'ಸರಕಾರಗಳಿಂದ ಆಳಲ್ಪಡುವ ಜನರ ಒಪ್ಪಿಗೆಯ ಆಧಾರದಲ್ಲಿ ಎಲ್ಲ ಆಡಳಿತಗಳು, ಎಲ್ಲ ಸರಕಾರಗಳನ್ನು ಸಮರ್ಥಿಸುವುದು ಅಮೆರಿಕ ಸ್ವಾತಂತ್ರ್ಯ ಘೋಷಣೆಯ ಕೇಂದ್ರಬಿಂದುವಾಗಿದೆ' ಎಂದು ಅವರು ಹೇಳಿದರು.

