ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ 'ಅನ್ನಪೂರ್ಣ ಯೋಜನೆ'ಯ ಹಣ ತಲುಪುವುದು ವಿಳಂಬವಾದದ್ದನ್ನು ಖಂಡಿಸಿ ನೂರಾರು ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರೆ, ಇತ್ತ ಮಾಲ್ದಾದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತ, ರಾಜ್ಯದ ನೂತನ ಬಿಜೆಪಿ ಸರ್ಕಾರವು ಈ ಮಹತ್ವಾಕಾಂಕ್ಷಿ ಕಲ್ಯಾಣ ಯೋಜನೆಯು ಯಶಸ್ವಿಯಾಗಿದೆ ಎಂದು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಜನ್ಮದಿನದಂದು ಸಂಭ್ರಮಾಚರಣೆ ನಡೆಸಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮುಂದಾಗಿದ್ದಾರೆ.
ಮಾಲ್ದಾದ ಗಾಜೋಲ್‌ನಲ್ಲಿ 32 ವರ್ಷದ ಅನಿತಾ ಖಾತೂನ್ ಅವರು ಶವವಾಗಿ ಪತ್ತೆಯಾಗಿದ್ದರು. ಅನಿತಾ ಅವರು ಕಚೇರಿಗಳಿಗೆ ನಿರಂತರವಾಗಿ ಅಲೆದಾಡಿದರೂ ಅವರಿಗೆ ಅನ್ನಪೂರ್ಣ ಯೋಜನೆಯ ಭತ್ಯೆ ಸಿಕ್ಕಿರಲಿಲ್ಲ. ಇದರಿಂದಾಗಿ ಹತಾಶೆಗೆ ಒಳಗಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅನಿತಾ ಸಾವಿನ ಪ್ರಕರಣ ಕುರಿತು ಪೊಲೀಸ್ ತನಿಖೆ ಇನ್ನೂ ನಡೆಯುತ್ತಿದ್ದರೂ, ರಾಜ್ಯದಲ್ಲಿ ಮಹಿಳೆಯರಿಗೆ ನೆರವಾಗಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಸರ್ಕಾರ ಹೊಣೆಗಾರಿಕೆ ವಹಿಸಿಕೊಳ್ಳುವ ಮೊದಲು ಇನ್ನೆಷ್ಟು ಮಹಿಳೆಯರು ಸಂಕಷ್ಟ ಅನುಭವಿಸಬೇಕು' ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪ್ರಶ್ನಿಸಿದೆ.
'ಅನ್ನಪೂರ್ಣ ಯೋಜನೆ' ಸುವೇಂದು ಸರ್ಕಾರದ ಮಹತ್ವಾಕಾಂಕ್ಷಿ ಮಹಿಳಾ ಕಲ್ಯಾಣ ಯೋಜನೆಯಾಗಿದೆ. ಈ ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ 'ಲಕ್ಷ್ಮೀ ಭಂಡಾರ' ಯೋಜನೆಯ ಮರುರೂಪವಾಗಿದೆ. ಲಕ್ಷ್ಮೀ ಭಂಡಾರ ಯೋಜನೆಯಡಿ ಸುಮಾರು 2.42 ಕೋಟಿ ಫಲಾನುಭವಿಗಳು ಮಾಸಿಕ ನೆರವು ಪಡೆಯುತ್ತಿದ್ದು, ಸಾಮಾನ್ಯ ವರ್ಗದ ಮಹಿಳೆಯರಿಗೆ ₹1,500 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ₹1,700 ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನಿರ್ಬಂಧಗಳು ಸೇರಿದಂತೆ ಅರ್ಹತಾ ಷರತ್ತುಗೊಳಪಟ್ಟು ಪ್ರತಿಯೊಬ್ಬ ಮಹಿಳೆಗೆ ಮಾಸಿಕ ನೆರವನ್ನು ₹3,000ಕ್ಕೆ ಏರಿಸಿದೆ.
'ಅನ್ನಪೂರ್ಣ ಯೋಜನೆಯ ವಾರ್ಷಿಕ ಅನುದಾನವನ್ನು ₹48,000 ಕೋಟಿಗೆ ಹೆಚ್ಚಳ ಮಾಡಲಾಗಿದೆ. ಆ.17ರಿಂದ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು' ಎಂದು ಸುವೇಂದು ಅಧಿಕಾರಿ ಈಚೆಗೆ ಹೇಳಿದ್ದರು.
ಮಹಿಳಾ ಕಲ್ಯಾಣವನ್ನು ವಿಸ್ತರಿಸುವ ಮತ್ತು ಸುಗಮಗೊಳಿಸುವ ಭರವಸೆಯ ಭಾಗವಾಗಿ ಸರ್ಕಾರವು ಜೂನ್ 1ರಂದು ಅನ್ನಪೂರ್ಣ ಯೋಜನೆ ಭತ್ಯೆಯನ್ನು ವಿತರಿಸಲು ಪ್ರಾರಂಭಿಸಿತ್ತು. ಈಗಾಗಲೇ ಮೊದಲ ಕಂತು ಫಲಾನುಭವಿಗಳ ಖಾತೆಗೆ ಜಮೆ ಆಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆಗಸ್ಟ್ ಕಂತಿಗೆ 1.45 ಕೋಟಿ ಮಹಿಳೆಯರನ್ನು ಅರ್ಹರು ಎಂದು ಗುರುತಿಸಲಾಗಿದ್ದು, ಪರಿಶೀಲನೆ ಬಳಿಕ 17 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದ ಕಾರಣ 10 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದರೆ, ಇತರ ಅರ್ಜಿಗಳು ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರಣ ರದ್ದಾಗಿವೆ.
ಅರ್ಹರಾಗಿದ್ದರೂ ಭತ್ಯೆ ಸಿಕ್ಕಿಲ್ಲ ಎಂದು ಆರೋಪಿಸಿ ಕಳೆದ ಕೆಲವು ದಿನಗಳಿಂದ ಪಶ್ಚಿಮ ಬಂಗಾಳದಾದ್ಯಂತ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಶೀಲನೆ ಹಂತದಲ್ಲಿರುವ ಅಥವಾ ತಿರಸ್ಕರಿಸಲ್ಪಟ್ಟ ಅರ್ಜಿಗಳನ್ನು ಮರು ಪರಿಶೀಲನೆ ನಡೆಸಲಾಗುವುದು ಎಂದು ಸರ್ಕಾರ ಸಬೂಬು ಹೇಳುತ್ತಿದೆ.
ಅನ್ನಪೂರ್ಣ ಯೋಜನೆಯ ಫಲಾನುಭವಿಗಳ ಸಂಖ್ಯೆ ಜೂನ್‌ನಲ್ಲಿ 28 ಲಕ್ಷ, ಜುಲೈನಲ್ಲಿ 1.19 ಕೋಟಿ ಮತ್ತು ಆಗಸ್ಟ್‌ನಲ್ಲಿ 1.45 ಕೋಟಿಗೆ ಏರಿಕೆಯಾಗಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಇನ್ನೂ 20ರಿಂದ 30 ಲಕ್ಷ ನೈಜ ಹಕ್ಕುದಾರರಿದ್ದರೆ, ಅವರಿಗೆ ಹಣ ಪಾವತಿಸಲು ವ್ಯವಸ್ಥೆ ಮಾಡುತ್ತೇವೆ. ಯಾವುದೇ ಅರ್ಹ ಮಹಿಳೆಗೆ ವಂಚನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದೂ ಅವರು ಭರವಸೆ ನೀಡಿದ್ದರು.
ಪ್ರತಿಭಟನೆಗೆ ಟಿಎಂಸಿಯೇ ಕಾರಣ ಎಂದು ಗುಡುಗಿದ ಅವರು, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ಫಲಾನುಭವಿಗಳನ್ನು ದಾರಿ ತಪ್ಪಿಸುತ್ತಿದ್ದು, ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದರು.
ಟಿಎಂಸಿ ಆಡಳಿತದ ಅವಧಿಯಲ್ಲಿ ಬಿಜೆಪಿ ಬೆಂಬಲಿಗರಿಗೆ ಕಲ್ಯಾಣ ಯೋಜನೆಯ ಸೌಲಭ್ಯಗಳನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಲಾಗಿತ್ತು. ಆದರೆ, ರಾಜಕೀಯ ಉದ್ದೇಶದಿಂದ ಸೌಲಭ್ಯಗಳಿಂದ ವಂಚಿತರಾಗಿದ್ದವರಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಹೇಳಿದ್ದರು.
ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದಾದ್ಯಂತ 'ಅನ್ನಪೂರ್ಣ ದಿವಸ' ಆಚರಿಸಲಾಗುವುದು ಮತ್ತು ಬಿಜೆಪಿ ಸರ್ಕಾರವು 'ಅನ್ನಪೂರ್ಣ ಯೋಜನೆ'ಯ ಸಾಧನೆಯನ್ನು ಎತ್ತಿತೋರಿಸಲು ಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದರು.
ಮೋದಿ ಅವರ ಜನ್ಮದಿನದ ಸವಿನೆನಪಿಗಾಗಿ ಕೋಲ್ಕತ್ತದಲ್ಲಿ ಒಂದು ಲಕ್ಷ ಅನ್ನಪೂರ್ಣ ಯೋಜನೆ ಫಲಾನುಭವಿಗಳೊಂದಿಗೆ ರ‍್ಯಾಲಿ ನಡೆಸುವುದಾಗಿಯೂ ಅವರು ಹೇಳಿದ್ದರು.
ರಾಜ್ಯದಾದ್ಯಂತ ತೀವ್ರಗೊಂಡ ಪ್ರತಿಭಟನೆ
ಸುವೇಂದು ಅಧಿಕಾರಿ ಅವರು ಭರವಸೆ ನೀಡಿದ ಹೊರತಾಗಿಯೂ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿಲ್ಲ ಎಂದು ಮಹಿಳೆಯರು ಬಿಡಿಒ ಕಚೇರಿ, ಪುರಸಭೆ ಕಚೇರಿ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಎದುರು ಧರಣಿ ನಡೆಸುತ್ತಿದ್ದಾರೆ. ಕೆಲವೆಡೆ ರಸ್ತೆ ಮತ್ತು ರೈಲು ತಡೆ ನಡೆಸಲಾಗಿದೆ.
ಕೋಲ್ಕತ್ತದ ಬಿರಾಟಿಯಲ್ಲಿ ನೂರಾರು ಮಹಿಳೆಯರು ರೈಲು ತಡೆದು ಧರಣಿ ನಡೆಸಿದ್ದರಿಂದ ಶೀಲ್ದಾ-ಬೊಂಗಾಂವ್ ವಿಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರೈಲು ಸೇವೆ ವ್ಯತ್ಯಯವಾಗಿತ್ತು.
ಆಗಸ್ಟ್ 20ರೊಳಗೆ ಹಣ ಬರಲಿದೆ ಎಂದು ಸರ್ಕಾರ ಭರವಸೆ ನೀಡಿದ್ದರೂ ಖಾತೆಗೆ ಜಮೆ ಆಗಿಲ್ಲ ಎಂದು ಪ್ರತಿಭಟನಾನಿರತ ಅರ್ಪಿತಾ ಚಕ್ರವರ್ತಿ ತಿಳಿಸಿದ್ದಾರೆ.
ಮುರ್ಷಿದಾಬಾದ್‌ನ ಜಂಗೀಪುರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, 100ಕ್ಕೂ ಹೆಚ್ಚು ಮಹಿಳೆಯರು ಪುರಸಭೆ ಕಚೇರಿಗೆ ನುಗ್ಗಿದ್ದರು.
ಪಶ್ಚಿಮ ಮೇದಿನೀಪುರದಲ್ಲಿ ಟಿಎಂಸಿ ಸರ್ಕಾರ ನೀಡುತ್ತಿದ್ದ 'ಲಕ್ಷ್ಮೀ ಭಂಡಾರ' ಯೋಜನೆ ಪ್ರಮಾಣಪತ್ರಗಳನ್ನು ಹಿಡಿದಿದ್ದ ಮಹಿಳೆಯರ ಗುಂಪೊಂದು ಸಚಿವೆ ಅಗ್ನಿಮಿತ್ರ ಪಾಲ್ ಅವರಿಗೆ ಮುತ್ತಿಗೆ ಹಾಕಿದೆ ಎಂದು ವರದಿಯಾಗಿದೆ.
ಮಾಲ್ದಾದ ಕಲಿಯಾಚಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.

