HEALTH TIPS

ಸಂಪುಟ ಪುನರ್‌ರಚನೆ: ಎದುರಾಳಿಗಳಿಗೆ ಸಚಿವ ಸ್ಥಾನ; ಏನಿದು ಮೋದಿ ಲೆಕ್ಕಾಚಾರ?

ನವದೆಹಲಿ: ನೂತನ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ಆಗುತ್ತಿದ್ದಂತೆಯೇ, ಇದೀಗ ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯತ್ತ ಬಿಜೆಪಿ ಗಮನ ಹರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 


ಪಕ್ಷದಲ್ಲಿ ಜವಾಬ್ದಾರಿ ಪಡೆದವರು ಹಾಗೂ ಸಂಸತ್ತಿನಲ್ಲಿ ತಮ್ಮ ಅವಧಿ ಪೂರ್ಣಗೊಳಿಸುತ್ತಿರುವ ನಾಯಕರು ತಮ್ಮ ಸ್ಥಾನಗಳನ್ನು ತೆರವುಗೊಳಿಸಲಿದ್ದು ಹೊಸಬರು, ಯುವಕರು ಮತ್ತು ಮಿತ್ರ ಪಕ್ಷಗಳಿಗೆ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.

ಸಂಪುಟ ಪುನರ್‌ರಚನೆ: ಎದುರಾಳಿಗಳಿಗೆ ಸಚಿವ ಸ್ಥಾನ; ಏನಿದು ಮೋದಿ ಲೆಕ್ಕಾಚಾರ?

ಒಂದು ಸಾಲಿನಲ್ಲಿಬಿಜೆಪಿಯು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ಷಮತೆ ಹಾಗೂ ರಾಜಕೀಯ ಲೆಕ್ಕಾಚಾರಗಳ ಆಧಾರದ ಮೇಲೆ ಕೇಂದ್ರ ಸಚಿವ ಸಂಪುಟವನ್ನು ಪುನರ್‌ರಚಿಸಲು ಸಿದ್ಧತೆ ನಡೆಸಿದೆ.

ಏನು? ಏಕೆ? ಹೇಗೆ?


ಕೇಂದ್ರ ಸಂಪುಟ ಪುನರ್‌ರಚನೆಯ ಹಿಂದಿರುವ ಮುಖ್ಯ ಉದ್ದೇಶವೇನು?

2029ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಯುವಕರು ಮತ್ತು ಮಿತ್ರ ಪಕ್ಷಗಳಿಗೆ ಅವಕಾಶ ನೀಡಲು ಹಾಗೂ ಸಚಿವರ ಮೇಲಿನ ಕಾರ್ಯಭಾರವನ್ನು ಕಡಿಮೆ ಮಾಡಲು ಈ ಬದಲಾವಣೆ ಮಾಡಲಾಗುತ್ತಿದೆ.


ಸಚಿವ ಸಂಪುಟದಿಂದ ಯಾರ್ಯಾರು ನಿರ್ಗಮಿಸುವ ಸಾಧ್ಯತೆಯಿದೆ?

ಪಕ್ಷದ ಸಂಘಟನಾತ್ಮಕ ಜವಾಬ್ದಾರಿ ಪಡೆದವರು, ರಾಜ್ಯಸಭಾ ಅವಧಿ ಪೂರ್ಣಗೊಂಡವರು ಹಾಗೂ ಪಿಯೂಷ್ ಗೋಯಲ್ ಅವರಂತಹ ರಾಷ್ಟ್ರೀಯ ಜವಾಬ್ದಾರಿ ಪಡೆದ ಸಚಿವರು ಸಂಪುಟದಿಂದ ಹೊರಬರುವ ನಿರೀಕ್ಷೆಯಿದೆ.


ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ಮಾನದಂಡಗಳೇನು?

ವಯಸ್ಸಿನ ಮಿತಿ, ರಾಜ್ಯಗಳ ಪ್ರಾತಿನಿಧ್ಯ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಹೊಸಬರಿಗೆ ಅವಕಾಶ ನೀಡಲಾಗುತ್ತದೆ. ವಿಶೇಷವಾಗಿ ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಆದ್ಯತೆ ನೀಡಲಾಗುವುದು.


ಎದುರಾಳಿ ಪಕ್ಷಗಳ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆಯೇ?

ಎನ್‌ಡಿಎ ಮೈತ್ರಿಕೂಟದೊಂದಿಗೆ ಮಾತುಕತೆ ನಡೆಸುತ್ತಿರುವ ಅಥವಾ ಸೇರ್ಪಡೆಗೊಳ್ಳುತ್ತಿರುವ ಡಿಎಂಕೆ, ಎನ್‌ಸಿಪಿ ಮತ್ತು ಅಕಾಲಿದಳದಂತಹ ಪಕ್ಷಗಳ ಪ್ರಮುಖ ನಾಯಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಪ್ರಮುಖ ಅಂಕಿಅಂಶಗಳು

69ಪ್ರಸ್ತುತ ಕೇಂದ್ರ ಸಂಪುಟದಲ್ಲಿರುವ ಸಚಿವರ ಸಂಖ್ಯೆ81ಸಂವಿಧಾನದ ಪ್ರಕಾರ ಗರಿಷ್ಠ ಸಚಿವ ಸ್ಥಾನಗಳ ಮಿತಿ12ಸಂಪುಟದಲ್ಲಿರುವ 70 ವರ್ಷ ಮೇಲ್ಪಟ್ಟ ಸಚಿವರ ಸಂಖ್ಯೆ14ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಸಚಿವರು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಪ್ರಧಾನಿ ಸೇರಿದಂತೆ ಕೇಂದ್ರ ಸಂಪುಟದಲ್ಲಿ 69 ಸಚಿವರಿದ್ದಾರೆ. ಸಂವಿಧಾನದ ವಿಧಿ 75(1A) ಪ್ರಕಾರ ಗರಿಷ್ಠ 81 ಸಚಿವರನ್ನು ಹೊಂದಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದ್ದು, ಇನ್ನೂ 12 ಸಚಿವ ಸ್ಥಾನಗಳು ಖಾಲಿ ಇವೆ. 2029ರ ಲೋಕಸಭಾ ಚುನಾವಣೆ ಹಾಗೂ ಅದಕ್ಕೂ ಮುನ್ನ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕೇವಲ ರಾಜಕೀಯ ಲೆಕ್ಕಾಚಾರ ಮಾತ್ರವಲ್ಲದೆ, ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಸಚಿವರ ಮೇಲಿನ ಕಾರ್ಯಭಾರವನ್ನು ಕಡಿಮೆ ಮಾಡುವುದು ಕೂಡ ಪಕ್ಷದ ಉದ್ದೇಶವಾಗಿದೆ.

ಯಾರು ನಿರ್ಗಮಿಸಬಹುದು?

ಇತ್ತೀಚೆಗಷ್ಟೇ ಸಂಪುಟದಲ್ಲಿ ಮೂವರು ಸಚಿವರು ರಾಜೀನಾಮೆ ನೀಡಿದರು. ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಪರಿಣಾಮ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಹಾಗೂ ರೈಲ್ವೆ ರಾಜ್ಯ ಸಚಿವ ರವನೀತ್ ಸಿಂಗ್ ಅವರ ರಾಜ್ಯಸಭಾ ಅವಧಿ ಪೂರ್ಣಗೊಂಡಿದ್ದರಿಂದ ಅವರು ಸಚಿವ ಸ್ಥಾನದಿಂದ ನಿರ್ಗಮಿಸಿದ್ದಾರೆ.

ಪಕ್ಷದ ಸಂಘಟನಾತ್ಮಕ ಜವಾಬ್ದಾರಿ ವಹಿಸಿಕೊಂಡಿರುವ ದೆಹಲಿ ಮತ್ತು ಉತ್ತರ ಪ್ರದೇಶದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಚಿವರಾದ ಹರ್ಷ್ ಮಲ್ಹೋತ್ರಾ ಮತ್ತು ಪಂಕಜ್ ಚೌಧರಿ ಅವರು ಸಂಪುಟದಿಂದ ಹೊರಬರುವ ಸಾಧ್ಯತೆಯಿದೆ. ಸಚಿವ ಪಿಯೂಷ್ ಗೋಯಲ್ ಅವರಿಗೆ ಪಕ್ಷದ ರಾಷ್ಟ್ರೀಯ ಖಜಾಂಚಿ ಜವಾಬ್ದಾರಿ ನೀಡಿರುವುದರಿಂದ ಅವರು ಸಹ ಸಂಪುಟದಿಂದ ಹೊರಬರಲಿದ್ದಾರೆ ಎನ್ನಲಾಗಿದೆ.

ರಾಜ್ಯಸಭಾ ಸದಸ್ಯರಾದ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಬಿ.ಎಲ್. ವರ್ಮಾ ಅವಧಿಯೂ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದ್ದು ಅವರು ಕೂಡ ಸಂಪುಟದಿಂದ ಹೊರಬರಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಕಾರ್ಯಕ್ಷಮತೆ ಆಧಾರದ ಮೇಲೆಯೂ ಕೆಲವು ಸಚಿವರನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪಕ್ಷ ನೀಡಿಲ್ಲ. 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ನಿಯಮವನ್ನು ಪಾಲಿಸಿಕೊಂಡು ಬಂದಿರುವ ಬಿಜೆಪಿಯು ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಹೇಳಿದೆ. ಸಚಿವ ಸ್ಥಾನದ ರೇಸ್‌ನಲ್ಲಿದ್ದ ಸ್ಮೃತಿ ಇರಾನಿ, ವಿನೋದ್ ತಾವಡೆ, ಸತೀಶ್ ಪೂನಿಯಾ ಮತ್ತು ತರುಣ್ ಚುಗ್ ಅವರು ಪಕ್ಷದ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.

ಯಾರಿಗೆಲ್ಲ ಅವಕಾಶ; ಲೆಕ್ಕಾಚಾರ ಏನು?

ಯಾರು ಸಂಪುಟದಲ್ಲಿ ಉಳಿಯಬೇಕು, ಯಾರು ನಿರ್ಗಮಿಸಬೇಕು ಮತ್ತು ಯಾರನ್ನು ಹೊಸದಾಗಿ ಸೇರ್ಪಡೆಗೊಳಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ವಯಸ್ಸಿನ ಮಾನದಂಡವೂ ಬಿಜೆಪಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 2024ರಲ್ಲಿ 'ಮೋದಿ 3.0' ಸರ್ಕಾರ ಅಧಿಕಾರಕ್ಕೆ ಬಂದಾಗ ಶೇ 65ಕ್ಕೂ ಹೆಚ್ಚು ಸಚಿವರು 51 ರಿಂದ 70 ವರ್ಷ ವಯೋಮಾನದವರಾಗಿದ್ದರು. ಶೇ 24ರಷ್ಟು ಸಚಿವರು 31 ರಿಂದ 50 ವರ್ಷ ವಯಸ್ಸಿನವರಾಗಿದ್ದರು. ಪ್ರಸ್ತುತ 12 ಕ್ಯಾಬಿನೆಟ್ ಸಚಿವರು ಮತ್ತು ಸ್ವತಂತ್ರ ಖಾತೆ ರಾಜ್ಯ ಸಚಿವರು 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಬಿಹಾರದ ಹೆಚ್‌ಎಎಮ್‌ (HAM) ನಾಯಕರಾದ ಜಿತನ್ ರಾಮ್ ಮಾಂಝಿ (81) ಅತ್ಯಂತ ಹಿರಿಯ ಸಚಿವರಾಗಿದ್ದರೆ, ಆಂಧ್ರಪ್ರದೇಶದ ಟಿಡಿಪಿ ಮುಖಂಡ ಕೆ. ರಾಮ್ ಮೋಹನ್ ನಾಯ್ಡು (38) ಕಿರಿಯ ಸಚಿವರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಯುವ ಸಚಿವರು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯಗಳ ಪ್ರಾತಿನಿಧ್ಯ ವಿಷಯಕ್ಕೆ ಬಂದರೆ, ವಿರೋಧ ಪಕ್ಷ ಕಾಂಗ್ರೆಸ್ ಆಡಳಿತದಲ್ಲಿರುವ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಿಂದ ಹೊಸ ಮುಖಗಳನ್ನು ಸೇರ್ಪಡೆಗೊಳಿಸುವ ಕುರಿತು ಪರಿಶೀಲಿಸಲಾಗುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಹೆಸರುಗಳು ಕೂಡ ಪರಿಶೀಲನೆಯಲ್ಲಿವೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಠಾಕ್ರೆ ಬಣದ ಸಂಸದರ ಸೇರ್ಪಡೆಯಾಗಿರುವುದರಿಂದ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಹಾಗೂ ಠಾಕ್ರೆ ಬಣದ ಸಂಸದರೊಬ್ಬರಿಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ. ಎನ್‌ಸಿಪಿಯ ಶರದ್ ಪವಾರ್ ಬಣ ಕೂಡ ಎನ್‌ಡಿಎ ಸೇರುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಒಂದು ವೇಳೆ ಸೇರ್ಪಡೆಯಾದರೆ ಸುಪ್ರಿಯಾ ಸುಳೆಗೆ ಕ್ಯಾಬಿನೆಟ್‌ ದರ್ಜೆಯ ಸ್ಥಾನ ಸಿಗಲಿದೆ.

ಇತ್ತ ಪಂಜಾಬ್‌ನಲ್ಲಿ ಚುನಾವಣೆ ಇರುವುದರಿಂದ ಆಮ್ ಆದ್ಮಿ ಪಾರ್ಟಿಯಿಂದ (ಎಎಪಿ) ಬಿಜೆಪಿಗೆ ಸೇರ್ಪಡೆಗೊಂಡ ರಾಘವ್ ಚಡ್ಡಾ ನೇತೃ ರಾಜ್ಯಸಭಾ ಸಂಸದರ ಗುಂಪಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿದೆ. ಈ ಗುಂಪಿನ ಸಂಸದ ಸಂದೀಪ್ ಪಾಠಕ್ ಅವರಿಗೆ ಈಗಾಗಲೇ ಪಕ್ಷದ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.

ಅಲ್ಲದೆ, ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ (ಎಸ್‍ಎಡಿ) ಮತ್ತು ಬಿಜೆಪಿ ಮೈತ್ರಿ ಮರುಸ್ಥಾಪನೆಯಾಗುವ ಲಕ್ಷಣಗಳಿದ್ದು, ಅಕಾಲಿದಳಕ್ಕೆ ಮತ್ತೆ ಸಂಪುಟ ಪ್ರಾತಿನಿಧ್ಯ ಸಿಗಬಹುದು. ಎಸ್‍ಎಡಿ ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ ಮತ್ತೆ ಸಂಪುಟಕ್ಕೆ ಮರಳುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಹೊರಬಂದು ಎನ್‌ಸಿಪಿಐ (NCPI) ಪಕ್ಷದ ಮೂಲಕ ಎನ್‌ಡಿಎಗೆ ಬೆಂಬಲ ಸೂಚಿಸಿರುವ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಸಂಸದರ ತಂಡಕ್ಕೂ ಕೇಂದ್ರ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.

ಇನ್ನೊಂದೆಡೆ, ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷದೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿರುವುದಕ್ಕೆ ಅಸಮಾಧಾನಗೊಂಡಿರುವ ಡಿಎಂಕೆ, ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟದಿಂದ ಹೊರಬಂದು ಎನ್‌ಡಿಎ ಸೇರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಒಂದು ವೇಳೆ ಡಿಎಂಕೆ, ಎನ್‌ಡಿಎ ಸೇರಿದರೆ ಸ್ಟಾಲಿನ್‌ ಹಾಗೂ ಕನ್ನಿಮೊಳಿ ಅವರಿಗೆ ಸಂಪುಟ ದರ್ಜೆಯ ಸ್ಥಾನ ಸಿಗಲಿದೆ.

14 ಸಚಿವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದ್ದು, ಸಂಪುಟ ಪುನರ್‌ರಚನೆಯ ಬಳಿಕ ಈ ಜವಾಬ್ದಾರಿಯನ್ನು ಮರುಹಂಚಿಕೆ ಮಾಡಲು ಬಿಜೆಪಿ ನಿರ್ಧರಿಸಿದೆ. ಇವರಲ್ಲಿ ಅಮಿತ್ ಶಾ (ಗೃಹ ಮತ್ತು ಸಹಕಾರ), ಜೆ.ಪಿ.ನಡ್ಡಾ (ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ), ಶಿವರಾಜ್ ಸಿಂಗ್ ಚೌಹಾಣ್ (ಕೃಷಿ, ಗ್ರಾಮೀಣಾಭಿವೃದ್ಧಿ), ಮನೋಹರ್ ಲಾಲ್ (ವಸತಿ ಮತ್ತು ನಗರ ವ್ಯವಹಾರಗಳು, ವಿದ್ಯುತ್), ಹೆಚ್.ಡಿ.ಕುಮಾರಸ್ವಾಮಿ (ಭಾರೀ ಕೈಗಾರಿಕೆಗಳು ಮತ್ತು ಉಕ್ಕು), ರಾಜೀವ್ ರಂಜನ್ ಸಿಂಗ್ ಲಲನ್ (ಪಂಚಾಯತ್ ರಾಜ್, ಮೀನುಗಾರಿಕೆ ಮತ್ತು ಪಶುಸಂಗೋಪನೆ), ಪ್ರಲ್ಹಾದ ಜೋಶಿ (ಗ್ರಾಹಕ ವ್ಯವಹಾರಗಳು ಮತ್ತು ಆಹಾರ, ನವೀಕರಿಸಬಹುದಾದ ಇಂಧನ, ಶಿಕ್ಷಣ), ಅಶ್ವಿನಿ ವೈಷ್ಣವ್ (ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಐಟಿ), ಜ್ಯೋತಿರಾದಿತ್ಯ ಸಿಂಧಿಯಾ (ಸಂಪರ್ಕ, ಈಶಾನ್ಯ ಪ್ರದೇಶ ಅಭಿವೃದ್ಧಿ), ಗಜೇಂದ್ರ ಸಿಂಗ್ ಶೇಖಾವತ್ (ಸಂಸ್ಕೃತಿ, ಪ್ರವಾಸೋದ್ಯಮ), ಕಿರಣ್ ರಿಜಿಜು (ಸಂಸದೀಯ ವ್ಯವಹಾರಗಳು, ಅಲ್ಪಸಂಖ್ಯಾತ ವ್ಯವಹಾರಗಳು), ಮನ್ಸೂಖ್ ಮಾಂಡವಿಯಾ (ಕಾರ್ಮಿಕ, ಯುವಜನ ವ್ಯವಹಾರಗಳು ಮತ್ತು ಕ್ರೀಡೆ) ಹಾಗೂ ಜಿ. ಕಿಶನ್ ರೆಡ್ಡಿ (ಕಲ್ಲಿದ್ದಲು, ಗಣಿ) ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries