HEALTH TIPS

ಕೋಟಿ ಕೋಟಿ ವ್ಯಯಿಸಿದರೂ ಉದ್ಯೋಗವಾಗಿ ಬದಲಾಗದ 'ಕೌಶಲ ತರಬೇತಿ'

ನವದೆಹಲಿ: ದೇಶದಲ್ಲಿ 2014-15ರಿಂದ ಈವರೆಗೆ 7.67 ಕೋಟಿ ಜನರಿಗೆ ಕೌಶಲ ತರಬೇತಿ ನೀಡಲಾಗಿದೆ. ಆದರೆ, ತರಬೇತಿ ಪಡೆದವರಲ್ಲಿ ಎಲ್ಲರಿಗೂ ಉದ್ಯೋಗ, ಉತ್ತಮ ವೇತನ ಅಥವಾ ಸ್ಥಿರ ಜೀವನೋಪಾಯ ಸಿಗುತ್ತಿಲ್ಲ ಎಂದು ನೀತಿ ಆಯೋಗದ ವರದಿ ಹೇಳಿದೆ.


'ರಿಇಮ್ಯಾಜಿನಿಂಗ್ ಸ್ಕಿಲಿಂಗ್ ಫಾರ್‌ ವಿಕಸಿತ್ ಭಾರತ್@2047' ಎಂಬ ತನ್ನ ವರದಿಯಲ್ಲಿ, ಕೌಶಲ ತರಬೇತಿಯ ಯಶಸ್ಸನ್ನು ಎಷ್ಟು ಮಂದಿ ತರಬೇತಿ ಪಡೆದರು ಎಂಬುದರ ಬದಲಿಗೆ, ತರಬೇತಿಯ ನಂತರ ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿತು ಎಂಬುದರ ಆಧಾರದಲ್ಲಿ ಅಳೆಯಬೇಕು ಎಂದು ಸಲಹೆ ನೀಡಿದೆ.

ಮುಂದುವರಿದು, 2025-26ರಲ್ಲಿ ಕೇಂದ್ರ ಸರ್ಕಾರವು ಕೌಶಲಾಭಿವೃದ್ಧಿಗೆ ಸುಮಾರು ₹34,000 ಕೋಟಿ ಮೀಸಲಿಟ್ಟಿವೆ. ಆದರೆ ಹಣದ ಹಂಚಿಕೆ ಬಹುತೇಕ ತರಬೇತಿ ಪಡೆದವರ ಸಂಖ್ಯೆಗೆ ಆಧಾರವಾಗಿದೆ. ಇದನ್ನು ಉದ್ಯೋಗದೊಂದಿಗೆ ಜೋಡಿಸಬೇಕು ಎಂದು ವರದಿ ಹೇಳಿದೆ.

ಶಿಕ್ಷಣ-ಉದ್ಯೋಗದ ನಡುವೆ ದೊಡ್ಡ ಅಂತರ:

ಆರ್ಥಿಕ ಸಮೀಕ್ಷೆ 2024-25ರ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಶಿಕ್ಷಣ ಮತ್ತು ಉದ್ಯೋಗದ ನಡುವೆ ಅಂತರ ಹೆಚ್ಚಿರುವುದನ್ನು ಆಯೋಗ ಬೊಟ್ಟು ಮಾಡಿದೆ. ಪದವಿ ಪಡೆದವರಲ್ಲಿ ಕೇವಲ ಶೇ 8.25ರಷ್ಟು ಮಂದಿ ತಮ್ಮ ವಿದ್ಯಾರ್ಹತೆಗೆ ಹೊಂದುವ ಉದ್ಯೋಗದಲ್ಲಿದ್ದಾರೆ ಎಂದು ಅದು ತಿಳಿಸಿದೆ.

ಪದವೀಧರರ ನಿರುದ್ಯೋಗ ಪ್ರಮಾಣ ಶೇ 13ರಷ್ಟಿದ್ದು, ಪದವೀಧರ ಮಹಿಳೆಯರಲ್ಲಿ ಇದು ಶೇ 20.4ಕ್ಕೆ ಏರಿದೆ. ದೇಶದ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇ 3.2ರಷ್ಟಿದೆ ಎಂದು ಹೇಳಿದೆ.

ಪದವಿ ಹಂತದಲ್ಲಿ 3.4 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 1.13 ಕೋಟಿ ಮಂದಿ ಬಿಎ ಓದುತ್ತಿದ್ದಾರೆ. ಬಿಎ, ಬಿಎಸ್ಸಿ ಮತ್ತು ಬಿಕಾಂ ಕೋರ್ಸ್‌ಗಳಲ್ಲೇ 2 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಪಡೆಯಲು ಹಲವು ವಿದ್ಯಾರ್ಥಿಗಳು ಸಾಮಾನ್ಯ ಪದವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

2024ರ ನವೆಂಬರ್‌ನಿಂದ 2025ರ ಜುಲೈವರೆಗೆ ರೈಲ್ವೆಯ 55,000 ಹುದ್ದೆಗಳಿಗೆ 1.86 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿರುವುದು ನಿರುದ್ಯೋಗದಿಂದ ಯುವಕರು ಕಂಗೆಟ್ಟಿರುವುದನ್ನು ತೋರಿಸುತ್ತದೆ ಎಂದು ಹೇಳಿದೆ.

ಹೆಚ್ಚು ಕೌಶಲ, ಹೆಚ್ಚು ಆದಾಯ:

ಉದ್ಯೋಗಕ್ಕೆ ಅಗತ್ಯವಾದ ಹೆಚ್ಚುವರಿ ಕೌಶಲಗಳನ್ನು ಪಡೆದ ಪದವೀಧರರಿಗೆ ಉತ್ತಮ ವೇತನ ಸಿಗುತ್ತಿದೆ. ಹೆಚ್ಚುವರಿ ಕೌಶಲ ಇಲ್ಲದ ಸಾಮಾನ್ಯ ಪದವೀಧರರ ಆರಂಭಿಕ ಸರಾಸರಿ ವೇತನ ತಿಂಗಳಿಗೆ ಸುಮಾರು ₹22,000. ಹೆಚ್ಚುವರಿ ಕೌಶಲ ಹೊಂದಿದವರಿಗೆ ಇದು ₹29,000ರಷ್ಟಿದೆ ಎಂದು ಕೆಲ ಸಮೀಕ್ಷೆಗಳನ್ನು ಉಲ್ಲೇಖಿಸಿ ಅದು ತಿಳಿಸಿದೆ.

ಅಪ್ರೆಂಟಿಸ್‌ಶಿಪ್‌ಗೆ ಕಡಿಮೆ ಅವಕಾಶ

ಅಪ್ರೆಂಟಿಸ್‌ಶಿಪ್ ವ್ಯವಸ್ಥೆಯೂ ದುರ್ಬಲವಾಗಿದೆ ಎಂದು ಹೇಳಿರುವ ಆಯೋಗ, 2025ರಲ್ಲಿ ಎನ್‌ಎಪಿಎಸ್‌(ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆ) ಅಡಿಯಲ್ಲಿ ಕೇವಲ 11.84 ಲಕ್ಷ ಹಾಗೂ ಎನ್‌ಎಟಿಎಸ್‌(ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ) ಅಡಿಯಲ್ಲಿ 5.23 ಲಕ್ಷ ಮಂದಿ ಅಪ್ರೆಂಟಿಸ್‌ಶಿಪ್ ಪಡೆದಿದ್ದಾರೆ ಎಂದು ತಿಳಿಸಿದೆ.

ಮಹಿಳೆಯರು, ಅಸಂಘಟಿತ ವಲಯಕ್ಕೆ ಹಣದ ಸಮಸ್ಯೆ:

ತರಬೇತಿ ಪಡೆಯಲು ಹಣದ ಕೊರತೆ ಮತ್ತು ಸೂಕ್ತ ಮಾಹಿತಿ ಇಲ್ಲದಿರುವುದು ಪ್ರಮುಖ ಅಡೆತಡೆಗಳಾಗಿವೆ. ಅಸಂಘಟಿತ ವಲಯದ ಶೇ 80ಕ್ಕೂ ಹೆಚ್ಚು ಮಂದಿ ಉಚಿತವಾಗಿ ಅಥವಾ ₹10 ಸಾವಿರಕ್ಕಿಂತ ಕಡಿಮೆ ವೆಚ್ಚದಲ್ಲಿ ಕೌಶಲ ತರಬೇತಿ ಪಡೆದಿದ್ದಾರೆ.

ತರಬೇತಿ ಪಡೆದ ಮಹಿಳೆಯರಲ್ಲಿ ಶೇ 72ರಷ್ಟು ಮಂದಿ ಉಚಿತ ಅಥವಾ ₹5 ಸಾವಿರ ಕಡಿಮೆ ವೆಚ್ಚದ ತರಬೇತಿಯನ್ನು ಆಯ್ಕೆ ಮಾಡಿದ್ದಾರೆ. ಪುರುಷರಲ್ಲಿ ಈ ಪ್ರಮಾಣ ಶೇ 52ರಷ್ಟಿದೆ.

ಸೂಕ್ತ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಮಹಿಳೆಯರಲ್ಲಿ ಶೇ 47, ಉದ್ಯೋಗ-ಶಿಕ್ಷಣದಿಂದ ಹೊರಗಿರುವ ಯುವಜನರಲ್ಲಿ ಶೇ 43 ಮತ್ತು ಅಸಂಘಟಿತ ವಲಯದ ಶೇ 55ರಷ್ಟು ಮಂದಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಸುಧಾರಣೆಗೆ ನೀತಿ ಆಯೋಗದ ಶಿಫಾರಸುಗಳು:

  • ಶಾಲೆಯಲ್ಲಿ 6ನೇ ತರಗತಿಯಿಂದಲೇ ವೃತ್ತಿಪರ ಕೌಶಲ ಪರಿಚಯಿಸುವುದು

  • ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಸಹಭಾಗಿತ್ವ ಹೆಚ್ಚಿಸುವುದು

  • ಉದ್ಯೋಗಕ್ಕೆ ತಕ್ಕಂತೆ ತರಬೇತಿ ಕಾರ್ಯಕ್ರಮ ರೂಪಿಸುವುದು

  • ಅಪ್ರೆಂಟಿಸ್‌ಶಿಪ್ ವ್ಯವಸ್ಥೆಯನ್ನು ಏಕೀಕರಿಸುವುದು

  • ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಮಾರ್ಗದರ್ಶನ ನೀಡುವುದು







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries