ನಾಗಪುರ: 'ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದಲ್ಲಿ ನಾನು ವೈಯಕ್ತಿಕವಾಗಿ ಭಾಗವಹಿಸಿದ್ದೆ. ಅದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ನಾಗಪುರದಲ್ಲಿ ನಡೆದ 'ಮಂಥನ್ 4 ಯುವ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಜನ್ಮಭೂಮಿ ಆಂದೋಲನವು ತಮ್ಮ ರಾಜಕೀಯ ಜೀವನದ ಪ್ರಮುಖ ಘಟ್ಟವಾಗಿತ್ತು ಎಂದು ಹೇಳಿದರು.
ಬಾಬರಿ ಮಸೀದಿ ಧ್ವಂಸದ ಬಳಿಕ ತಾವು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾಗಿ ಅವರು ನೆನಪಿಸಿಕೊಂಡರು.
'ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಶಕ್ತಿಯಿಂದಾಗಿ ಸಾಮಾನ್ಯ ವ್ಯಕ್ತಿಯೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ' ಎಂದು ಫಡ್ನವೀಸ್ ಹೇಳಿದರು.
►20ನೇ ವಯಸ್ಸಿನಲ್ಲೇ ಆಂದೋಲನದಲ್ಲಿ ಭಾಗಿ
ತಮ್ಮ 20ನೇ ವಯಸ್ಸಿನಲ್ಲಿ ರಾಮಜನ್ಮಭೂಮಿ ಆಂದೋಲನದಲ್ಲಿ ಭಾಗವಹಿಸಿದ್ದ ಅನುಭವವನ್ನು ಫಡ್ನವೀಸ್ ಹಂಚಿಕೊಂಡರು. 'ಅಯೋಧ್ಯೆಗೆ ತೆರಳುತ್ತಿದ್ದಾಗ ಲಾಠಿಚಾರ್ಜ್ ಮತ್ತು ಗುಂಡಿನ ದಾಳಿಯನ್ನು ಎದುರಿಸಿದ್ದೆ. ಬಳಿಕ ನನ್ನನ್ನು ಬಂಧಿಸಲಾಯಿತು. ಬದೌನ್ ಕೇಂದ್ರ ಕಾರಾಗೃಹದಲ್ಲಿ 18 ದಿನಗಳನ್ನು ಕಳೆದಿದ್ದೆ' ಎಂದು ಅವರು ಹೇಳಿದರು.
ಜೈಲಿನಿಂದ ಬಿಡುಗಡೆಯಾದ ಬಳಿಕವೂ ರಾಮಜನ್ಮಭೂಮಿ ಆಂದೋಲನದಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದಾಗಿ ಅವರು ತಿಳಿಸಿದರು. 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡಾಗ ತಾನು ಅಲ್ಲಿದ್ದೆ ಮತ್ತು ಆ ಘಟನೆಯನ್ನು ಕಂಡಿದ್ದೆ ಎಂದು ಫಡ್ನವೀಸ್ ಹೇಳಿದರು.
►'ರಾಜಕೀಯ ಬದಲಾವಣೆಯ ಸಾಧನ'
ತಾನು ಕೇವಲ ವಿರೋಧ ಪಕ್ಷದಲ್ಲಿರಲು ಮಾತ್ರ ಹುಟ್ಟಿದ್ದೇನೆ ಎಂದು ಭಾವಿಸಿದ್ದ ಸಮಯವಿತ್ತು. ಆದರೆ ಬಿಜೆಪಿಯ ಸಿದ್ಧಾಂತದಿಂದ ಆಕರ್ಷಿತರಾಗಿ ರಾಜಕೀಯಕ್ಕೆ ಬಂದೆ ಎಂದು ಅವರು ಹೇಳಿದರು.
ರಾಜಕೀಯವೆಂದರೆ ಕೇವಲ ಅಧಿಕಾರ ಪಡೆಯುವ ಮಾರ್ಗವಲ್ಲ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರಲು ರಾಜಕೀಯವು ಪ್ರಬಲ ಸಾಧನವಾಗಿದೆ ಎಂದು ಫಡ್ನವೀಸ್ ಯುವಕರಿಗೆ ಹೇಳಿದರು.
ತಳಮಟ್ಟದಿಂದ ರಾಜಕೀಯ ಆರಂಭಿಸಿ ಮುಖ್ಯಮಂತ್ರಿ ಹುದ್ದೆಗೇರಿದ ತಮ್ಮ ಜೀವನ ಮತ್ತು ಗುಜರಾತ್ನಲ್ಲಿ ಚಹಾ ಮಾರಾಟಗಾರನಾಗಿದ್ದ ನರೇಂದ್ರ ಮೋದಿ ಪ್ರಧಾನಿಯಾದ ಬೆಳವಣಿಗೆ-ಇವೆರಡೂ ಭಾರತದ ಪ್ರಜಾಪ್ರಭುತ್ವದ ಶಕ್ತಿಗೆ ಉದಾಹರಣೆಗಳು ಎಂದು ಫಡ್ನವೀಸ್ ಅಭಿಪ್ರಾಯಪಟ್ಟರು.

