ನವದೆಹಲಿ: ಕಾನೂನುಬಾಹಿರ ಹತ್ಯೆ, ಚಿತ್ರಹಿಂಸೆ ಹಾಗೂ ಹಿಂಸಾಚಾರಗಳಿಂದ ದಲಿತರು, ಬುಡಕಟ್ಟು ಜನರು ಹಾಗೂ ದುರ್ಬಲ ಜಾತಿಗಳನ್ನು ರಕ್ಷಿಸಬೇಕೆಂದು ಜನಾಂಗೀಯ ತಾರತಮ್ಯ ನಿರ್ಮೂಲನ ಕುರಿತ ವಿಶ್ವಸಂಸ್ಥೆಯ ಸಮಿತಿ (ಸಿಇಆರ್ಡಿ) ಮಂಗಳವಾರ ತಿಳಿಸಿದೆ. ಬಂಗಾಳಿ ಭಾಷಿಕ ಮುಸ್ಲಿಮರ ವಿರುದ್ಧವೂ ನಡೆಯುತ್ತಿರುವ ದ್ವೇಷಾಪರಾಧ ಕೃತ್ಯಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಅದು ಭಾರತ ಸರಕಾರವನ್ನು ಆಗ್ರಹಿಸಿದೆ.
''ಭಾರತದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗಳು ಅದರಲ್ಲೂ ವಿಶೇಷವಾಗಿ ದಲಿತರು ಹಾಗೂ ಪೌರೇತರರು ಸೇರಿದಂತೆ ಜನಾಂಗೀಯ-ಧಾರ್ಮಿಕ ಗುಂಪುಗಳು, ಬುಡಕಟ್ಟುಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರಗಳು ನಡೆಯುತ್ತಿರುವ ವರದಿಗಳ ಬಗ್ಗೆ ಸಮಿತಿಯು ತೀವ್ರ ಕಳವಳವನ್ನು ಹೊಂದಿದೆ'' ಎಂದ ಸಿಇಆರ್ಡಿ ವರದಿ ತಿಳಿಸಿದೆ.
'ಜನಾಂಗೀಯ ಹಿಂಸಾಚಾರ, ಅತಿರೇಕದ ಬಲಪ್ರಯೋಗ, ಕಾನೂನುಬಾಹಿರ ಹತ್ಯೆಗಳು, ಸೂಕ್ತ ಕಾನೂನು ಪ್ರಕ್ರಿಯೆಗಳಿಲ್ಲದೆ ಏಕಪಕ್ಷೀಯ ಹಾಗೂ ದೀರ್ಘಾವಧಿಯ ಬಂಧನ, ಚಿತ್ರಹಿಂಸೆ, ಹಾಗೂ ಲೈಂಗಿಕ ಹಿಂಸಾಚಾರದ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ವರದಿ ಹೇಳಿದೆ. ಈ ಎಲ್ಲಾ ಆರೋಪಗಳ ಬಗ್ಗೆ ತನಿಖೆ ನಡೆಸಿ, ಅವುಗಳಿಗೆ ಹೊಣೆಗಾರರಾದವರ ಬಗ್ಗೆ ತನಿಖೆ ನಡೆಸುವಂತೆ ಸಮಿತಿಯು ಭಾರತ ಸರಕಾರವನ್ನು ಆಗ್ರಹಿಸಿದೆ.
ಸಿಇಆರ್ಡಿಯು 18 ಮಂದಿ ಸ್ವತಂತ್ರ ಹಕ್ಕುಗಳ ತಜ್ಞರ ಸಮಿತಿಯನ್ನು ಹೊಂದಿದೆ, ಎಲ್ಲಾ ರೀತಿಯ ಜನಾಂಗೀಯ ತಾರತಮ್ಯವನ್ನು ನಿರ್ಮೂಲಗೊಳಿಸುವ ಒಡಂಬಡಿಕೆಗೆ ವಿಶ್ವಸಂಸ್ಥೆಯ 182 ಸದಸ್ಯ ರಾಷ್ಟ್ರಗಳು ಬದ್ಧವಾಗಿವೆಯೇ ಎಂಬ ಬಗ್ಗೆ ಸಮಿತಿಯು ನಿಗಾವಿರಿಸುತ್ತದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಜನಾಂಗೀಯ ತಾರತಮ್ಯವನ್ನು ನಿರ್ಮೂಲಗೊಳಿಸಬೇಕು, ಜನಾಂಗ, ಜಾತಿ, ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವುದನ್ನು ತೊಡೆದುಹಾಕುವುದನ್ನು ಹಾಗೂ ಕಾನೂನಿನ ಮುಂದೆ ಸರ್ವರಿಗೂ ಸಮಾನತೆಯನ್ನು 1962ರಲ್ಲಿ ಜಾರಿಗೊಂಡ ಈ ಒಡಂಬಡಿಕೆಯು ಪ್ರತಿಪಾದಿಸುತ್ತದೆ.
2007ರ ಆನಂತರ ಇದೇ ಮೊದಲ ಬಾರಿಗೆ ಭಾರತವು ಈ ತಿಂಗಳ ಆರಂಭದಲ್ಲಿ ಸಿಇಆರ್ಡಿಯ ಮುಂದೆ ಪರಾಮರ್ಶೆಗಾಗಿ ಹಾಜರಾಗಿತ್ತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನಿಯೋಗದ ನೇತೃತ್ವ ವಹಿಸಿದ್ದರು.
ಸಿಇಆರ್ಡಿಯ ಮುಂದೆ 'ಪರಾಮರ್ಶೆ'ಗಾಗಿ ಹಾಜರಾದ ಸಂದರ್ಭ ನಮ್ಮ ದೇಶದ ಬಹುತ್ವವಾದ, ವೈವಿಧ್ಯತೆ, ಜನಸಂಖ್ಯಾ ಪ್ರಮಾಣ ಹಾಗೂ ಸಂಕೀರ್ಣತೆ, ಸಾಂವಿಧಾನಿಕ ಮತ್ತು ಕಾನೂನಾತ್ಮಕ ಚೌಕಟ್ಟು ಹಾಗೂ ಸುರಕ್ಷತಾ ಕ್ರಮಗಳನ್ನು ತಾನು ಎತ್ತಿ ತೋರಿಸಿರುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೇತೃತ್ವದ ನಿಯೋಗ ಹೇಳಿದೆ. ಎಲ್ಲಾ ಭಾರತೀಯರಿಗೆ ಸಮಾನತೆ, ಘನತೆ ಹಾಗೂ ಅವಕಾಶವನ್ನು ಖಾತರಿಪಡಿಸುವೆಡೆಗೆ ನಮ್ಮ ಪಯಣವನ್ನು ಮುಂದುವರಿಸಲಿದ್ದೇವೆ'' ಎಂದು ಭಾರತೀಯ ನಿಯೋಗವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಿಇಆರ್ಡಿ ಅಭಿಪ್ರಾಯಗಳು ಹಾಗೂ ಮಾಡಿರುವ ಶಿಫಾರಸುಗಳಿಗೆ ಬದ್ಧವಾಗುವುದು ಕಡ್ಡಾಯವಲ್ಲದಿದ್ದರೂ, ಅದು ದೇಶದ ವರ್ಚಸ್ಸಿನ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ರೋಹಿಂಗ್ಯ, ಬಂಗಾಳಿ ಭಾಷಿಕ ಮುಸ್ಲಿಮರ ವಿರುದ್ಧ ಕಾರ್ಯಾಚರಣೆಗೆ ವಿಶ್ವಸಂಸ್ಥೆ ಸಮಿತಿ ಆತಂಕ
ಭಾರತದಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು, ಬಂಗಾಳಿ ಭಾಷಿಕ ಮುಸ್ಲಿಮರು, ವಲಸಿಗರು ಹಾಗೂ ಆಶ್ರಯಯಾಚಕರನ್ನು ಗುರಿಯಿರಿಸಿ ಕಾನೂನಾತ್ಮಕ ಕಾರ್ಯಾಚರಣೆಗಳನ್ನು ಹೆಚ್ಚಿಸಿರುವುದನ್ನು ಸಮಿತಿಯು ವರದಿಯಲ್ಲಿ ಎತ್ತಿ ತೋರಿಸಿದೆ. ಜನಾಂಗೀಯ ಆಧಾರದಲ್ಲಿ ಪೊಲೀಸರಿಂದ ಜನರ ಗುರುತು ತಪಾಸಣೆ, ಏಕಪಕ್ಷೀಯವಾಗಿ ಬಂಧನ, ಚಿತ್ರಹಿಂಸೆಯನ್ನು ಎಸಗಲಾಗುತ್ತಿದೆ ಎಂದು ಸಮಿತಿ ಹೇಳಿದೆ. ಇಂತಹ ಗುಂಪುಗಳ ವಿರುದ್ಧದ ತಾರತಮ್ಯ, ದ್ವೇಷಭಾಷಣ ಹಾಗೂ ದ್ವೇಷಾಪರಾಧಗಳನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸಾಮೂಹಿಕವಾಗಿ ದೇಶದಿಂದ ಉಚ್ಚಾಟನೆ ಮಾಡುವುದನ್ನು ನಿಲ್ಲಿಸುವಂತೆ ಸಮಿತಿ ಆಗ್ರಹಿಸಿದೆ. ಅಂತಾರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವ ವ್ಯಕ್ತಿಗಳ ಗಡಿಪಾರು ಅಥವಾ ಬಲವಂತದಿಂದ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಕ್ರಮಗಳ ಬಗ್ಗೆಯೂ ಸಮಿತಿಯು ಆತಂಕ ವ್ಯಕ್ತಪಡಿಸಿದೆ.
2017ರಲ್ಲಿ ಕೇಂದ್ರ ಗೃಹ ಸಚಿವಾಲಯವು ಹೊರಡಿಸಿದ ಆದೇಶ ಹಾಗೂ 2025ರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆನಂತರ ರೋಹಿಂಗ್ಯ, ಬಂಗಾಳಿ ಭಾಷಿಕ ಮುಸ್ಲಿಮರು ಹಾಗೂ ವಲಸಿಗರು ಹಾಗೂ ಆಶ್ರಯಕ್ಕಾಗಿ ಅರಸಿ ಬಂದವರ ಮೇಲೆ ಕಾನೂನು ಅನುಷ್ಠಾನ ಇಲಾಖೆಗಳ ಕಾರ್ಯಾಚರಣೆಗಳು ಇನ್ನೂ ಹೆಚ್ಚಾಗಿದೆ ಎಂದು ವರದಿಯು ಹೇಳಿದೆ.

