ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿರುವ ಎಲ್ಲಾ ಸಾಂಪ್ರದಾಯಿಕ ಕ್ಷಿಪಣಿ ವ್ಯವಸ್ಥೆಗಳ ತಂತ್ರಜ್ಞಾನವನ್ನು ಭಾರತೀಯ ರಕ್ಷಣಾ ಸಲಕರಣೆಗಳ ಉತ್ಪಾದನಾ ಕಂಪೆನಿಗಳಿಗೆ ಹಸ್ತಾಂತರಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂಗೀಕಾರ ನೀಡಿದ್ದಾರೆ.
ಈ ತಂತ್ರಜ್ಞಾನಗಳನ್ನು ಪಡೆದುಕೊಂಡ ಕಂಪೆನಿಗಳು ಕ್ಷಿಪಣಿಗಳನ್ನು ದೇಶದಲ್ಲಿ ಮಾತ್ರ ನಿರ್ಮಿಸಬಹುದಾಗಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಸ್ವದೇಶದಲ್ಲಿ ಕ್ಷಿಪಣಿ ನಿರ್ಮಾಣವನ್ನು ಉತ್ತೇಜಿಸುವುದು, ಆಮದಿತ ಕ್ಷಿಪಣಿಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆಗೊಳಿಸುವುದು ಹಾಗೂ ರಕ್ಷಣಾ ಸಲಕರಣೆಗಳ ಪೂರೈಕೆ ಜಾಲದಲ್ಲಿ ಅತಿ ಸಣ್ಣ, ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳು (ಎಮ್‌ಎಸ್‌ಎಮ್‌ಇ) ಸೇರಿದಂತೆ ದೇಶಿ ಕಂಪೆನಿಗಳ ಪಾತ್ರವನ್ನು ವಿಸ್ತರಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಸಚಿವಾಲಯ ಹೇಳಿದೆ.
ತಂತ್ರಜ್ಞಾನ ಹಸ್ತಾಂತರದಿಂದ ಅರ್ಹ ಭಾರತೀಯ ಕಂಪೆನಿಗಳಿಗೆ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸಾಂಪ್ರದಾಯಿಕ ಕ್ಷಿಪಣಿ ವ್ಯವಸ್ಥೆಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಅದು ಹೇಳಿದೆ.
ರಕ್ಷಣಾ ಕ್ಷೇತ್ರದಲ್ಲಿ ಸರಕಾರದ 'ಆತ್ಮನಿರ್ಭರ ಭಾರತ' ನೀತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಇಡಲಾಗಿರುವ ಮಹತ್ವದ ಹೆಜ್ಜೆ ಇದಾಗಿದೆ. ಈ ನಿರ್ಧಾರವು ಕ್ಷಿಪಣಿ ವ್ಯವಸ್ಥೆಗಳನ್ನು ಅಭಿವೃದ್ಧಿ ಹಂತದಿಂದ ಕೈಗಾರಿಕಾ ಮಟ್ಟದ ಉತ್ಪಾದನೆಗೆ ಸಿದ್ಧಪಡಿಸಲು ಈ ನಿರ್ಧಾರವು ಅವಕಾಶ ನೀಡುತ್ತದೆ.

