ಶ್ರೀನಗರ: ತಾನು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಜೊತೆ ಜಮ್ಮುಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಚರ್ಚಿಸುತ್ತೇನೆ, ಆದರೆ ಭಾರತದ ವಿರುದ್ಧ ದೂರುಗಳನ್ನು ಸಲ್ಲಿಸಲು ಈ ಭೇಟಿಯನ್ನು ಬಳಸಿಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳನ್ನು ಕೇಂದ್ರವೇ ಬಗೆಹರಿಸುತ್ತದೆ ಎಂದು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಬುಧವಾರ ಗೋರ್ ಆಗಮನಕ್ಕೂ ಮುನ್ನ ಹೇಳಿದರು.
'ಸುದೀರ್ಘ ಸಮಯದ ಬಳಿಕ ಅಮೆರಿಕದ ರಾಯಭಾರಿಯೋರ್ವರು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಬರಲಿ, ನಾವು ಕುಳಿತು ಮಾತನಾಡುತ್ತೇವೆ' ಎಂದು ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.
'ನಮ್ಮ ಭೇಟಿಯ ವೇಳೆ ನಾನು ಅವರ ಮಾತುಗಳನ್ನು ಕೇಳಲು ಬಯಸುತ್ತೇನೆ. ಅವರು ಸಹ ನಮ್ಮ ಮಾತುಗಳನ್ನು ಕೇಳಲು ಬರುತ್ತಿದ್ದಾರೆ. ನಮ್ಮ ನಡುವೆ ಎಂತಹ ಸಂಭಾಷಣೆ ನಡೆಯಲಿದೆ ಎಂದು ನೋಡೋಣ' ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಬ್ದುಲ್ಲಾ, 'ಇನ್ನೊಂದು ದೇಶದ ರಾಯಭಾರಿಗೆ ಅಥವಾ ಇನ್ನೊಂದು ದೇಶಕ್ಕೆ ನನ್ನ ದೇಶದ ಬಗ್ಗೆ ದೂರು ನೀಡುವುದು ನನ್ನ ಚಾಳಿಯಲ್ಲ. ನಮ್ಮ ಸಮಸ್ಯೆಗಳನ್ನು ಅಮೆರಿಕವು ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಸಮಸ್ಯೆಗಳನ್ನು ಕೇಂದ್ರ ಸರಕಾರವೇ ಬಗೆಹರಿಸಬೇಕು. ಇನ್ನೊಂದು ದೇಶದ ರಾಯಭಾರಿಗೆ ನನ್ನ ದೇಶದ ಬಗ್ಗೆ ದೂರು ನೀಡಿದರೆ ಅದು ತಪ್ಪಾಗುತ್ತದೆ' ಎಂದು ಹೇಳಿದರು.

