ಲಖನೌ: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮತ್ತು ಕುಶಿನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನೇಪಾಳದಿಂದ ರಾಜ್ಯಕ್ಕೆ ಹರಿದುಬರುವ ಗಂಡಕಿ ಸೇರಿದಂತೆ ವಿವಿಧ ನದಿಗಳ ನೀರಿನ ಮಟ್ಟದ ಮೇಲೆ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ.
ಬುಧವಾರ ನೇಪಾಳದಲ್ಲಿ ಸಂಭವಿಸಿದ ಪ್ರವಾಹ ದುರಂತದಲ್ಲಿ ಕನಿಷ್ಠ 359 ಮಂದಿ ಮೃತಪಟ್ಟಿದ್ದು, 826ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದ ಹಲವು ಜಿಲ್ಲೆಗಳಲ್ಲಿ ರಸ್ತೆ, ಸೇತುವೆಗಳು ಹಾಗೂ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ.
ಇದರ ನಡುವೆಯೇ, ನೇಪಾಳ-ಚೀನಾ ಗಡಿ ಸಮೀಪದ ಭೋಟೆ ಕೋಶಿ ನದಿಯ ಮೇಲ್ಭಾಗದಲ್ಲಿ ಬ್ಯಾರಿಯರ್ ಲೇಕ್ (ನೈಸರ್ಗಿಕ ತಡೆಗೋಡೆಯಿಂದ ರೂಪುಗೊಂಡ ಸರೋವರ) ನಿರ್ಮಾಣವಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಸರೋವರ ಒಡೆದರೆ ಕೆಳಭಾಗದ ಪ್ರದೇಶಗಳಲ್ಲಿ ಮತ್ತೊಮ್ಮೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೇಪಾಳದ ನದಿ ತೀರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ನೇಪಾಳದಿಂದ ಉತ್ತರ ಪ್ರದೇಶಕ್ಕೆ ಹರಿದು ಬರುವ ಗಂಡಕಿ, ದರ್ಜನಿಯಾ ಹಾಗೂ ಟೇಲ್ ಫಾಲ್ ನದಿಗಳ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇಡಲಾಗಿದೆ ಎಂದು ಮಹಾರಾಜ್‌ಗಂಜ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
'ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡುಬಂದರೆ ತಕ್ಷಣ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲು ತಂಡಗಳನ್ನು ಸಜ್ಜುಗೊಳಿಸಲಾಗಿದೆ. ನದಿತೀರ ಹಾಗೂ ತಗ್ಗು ಪ್ರದೇಶದ ಗ್ರಾಮಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದರೆ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ' ಎಂದು ಅವರು ಹೇಳಿದ್ದಾರೆ.
ಕುಶಿನಗರ ಜಿಲ್ಲೆಯಲ್ಲಿ ಗಂಡಕಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಮಹೇಂದ್ರ ಸಿಂಗ್ ತನ್ವರ್ ಹಾಗೂ ಪೊಲೀಸ್ ಅಧೀಕ್ಷಕ ಕೇಶವ್ ಕುಮಾರ್ ಅವರು ನದಿಪಾತ್ರದ ಗ್ರಾಮಗಳು ಮತ್ತು ವಾಲ್ಮೀಕಿನಗರ ಬ್ಯಾರೇಜ್ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ನದಿಯ ಸಮೀಪ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

