ಪುಣೆ: ಪಿಂಪ್ರಿ-ಚಿಂಚವಾಡ ಪೊಲೀಸ್ ಕಮಿಷನರೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಆಲಂದಿಯಲ್ಲಿ ಆಗಸ್ಟ್ 30ರಂದು ವಿವಾಹವಾಗಲು ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಈ ಘಟನೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕುಟುಂಬದವರಿಂದ ಆಕ್ಷೇಪವೂ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಬೇರೆ ಬೇರೆ ಜಿಲ್ಲೆಯವರಾದ ಈ ಇಬ್ಬರು ಮಹಿಳೆಯರು 2018ರಲ್ಲಿ ಪೊಲೀಸ್ ಪಡೆಗೆ ಸೇರ್ಪಡೆಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಒಂದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ವೇಳೆ ಇವರಿಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಬದಲಾಗಿದೆ.
ಇಬ್ಬರೂ ವೈದಿಕ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದಾರೆ. ಮದುವೆ ಕರೆಯೋಲೆಯೊಂದಿಗೆ ಮೇಲಧಿಕಾರಿಗಳಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಲಿಂಗ ಪರಿವರ್ತನೆ ಚಿಕಿತ್ಸೆ
ಈ ಇಬ್ಬರಲ್ಲಿ ಒಬ್ಬರು ಮುಂಬೈನ ಪ್ರಮುಖ ಆಸ್ಪತ್ರೆಯೊಂದರಲ್ಲಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಲು ಇಬ್ಬರೂ ಯೋಜಿಸುತ್ತಿದ್ದಾರೆ.
ಮತ್ತೊಂದು ಲಿಂಗ ಪರಿವರ್ತನೆ ಪ್ರಕರಣ
ಇದೇ ಪಿಂಪ್ರಿ-ಚಿಂಚವಾಡ ಕಮಿಷನರೇಟ್ನಲ್ಲಿ ಮತ್ತೊಬ್ಬ ಮಹಿಳಾ ಸಿಬ್ಬಂದಿ ಸರ್ಕಾರದಿಂದ ಅನುಮತಿ ಪಡೆದು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪ್ರಸ್ತುತ ತಮ್ಮನ್ನು ಸೇವಾ ಪುಸ್ತಕದಲ್ಲಿ ಪುರುಷ ಅಧಿಕಾರಿಯೆಂದು ಗುರುತಿಸುವಂತೆ ಅವರು ಸಲ್ಲಿಸಿದ ಅರ್ಜಿ ಪರಿಶೀಲನೆಯಲ್ಲಿದೆ.
ಈ ಎರಡು ಪ್ರತ್ಯೇಕ ಘಟನೆಗಳು ಪೊಲೀಸ್ ಇಲಾಖೆಯಲ್ಲಿ ಲಿಂಗ ಗುರುತು, ಸೇವಾ ದಾಖಲೆಗಳ ನವೀಕರಣ ಮತ್ತು ಸಲಿಂಗಿ ಸಂಬಂಧಗಳ ಕಾನೂನುಬದ್ಧತೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.

