ಲಖನೌ: ಮುಸ್ಲಿಂ ಮಹಿಳೆಯರು ಹಿಜಾಬ್ (ಶಿರವಸ್ತ್ರ) ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯ ಭಾಗವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಇಂದ್ರಜೀತ್ ಶುಕ್ಲಾ ಮತ್ತು ಜೆ.ಜೆ.ಮುನೀರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು, ಶಾಲೆಯ ಸಮವಸ್ತ್ರದ ಜತೆಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಶಾಲೆಗೆ ನಿರ್ದೇಶನ ನೀಡಬೇಕು ಎಂದು ಮುಸ್ಲಿಂ ಬಾಲಕಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಇತ್ತೀಚೆಗೆ ಈ ತೀರ್ಪು ಪ್ರಕಟಿಸಿತು.
'ಹೆಣ್ಣುಮಕ್ಕಳಿಗಾಗಿಯೇ ಮೀಸಲಾಗಿರುವ ವಿಭಾಗದಲ್ಲಿ ಓದುವ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಅಥವಾ ಶಿರವಸ್ತ್ರ ಧರಿಸದಿರುವುದು ಅಸಮಂಜಸ ಅಥವಾ ಪವಿತ್ರ ಕುರಾನ್‌ನ ಮೂಲತತ್ವಗಳ ಉಲ್ಲಂಘನೆಯೂ ಅಲ್ಲ. 'ಹಿಜಾಬ್' ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯ ಭಾಗವಲ್ಲ' ಎಂದು ನ್ಯಾಯಾಲಯ ಹೇಳಿತು.
'ಹಿಜಾಬ್ ಧರಿಸುವುದು ಧರ್ಮದ ಪಾಲನೆಯ ಅತ್ಯಗತ್ಯ ಆಚರಣೆ ಎಂದು ಇಸ್ಲಾಂ ಧರ್ಮದ ಯಾವುದೇ ದಾಖಲೆಯಲ್ಲಿ ಉಲ್ಲೇಖಿಸಿಲ್ಲ. ಇದರ ಹೊರತಾಗಿ, ಹಿಜಾಬ್ ಉಡುಪಿನ ವಿಷಯವಾಗಿರುವುದರಿಂದ, ಇಸ್ಲಾಂ ನಂಬಿಕೆಯ ಮೂಲಭೂತ ಅಂಶ ಎಂದು ಸಮರ್ಥಿಸಲೂ ಸಾಧ್ಯವಿಲ್ಲ' ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
'ಹಿಜಾಬ್ ಧರಿಸದಿರುವವರು ಪಾಪಿಗಳಾಗುತ್ತಾರೆ ಅಥವಾ ಇಸ್ಲಾಂ ತನ್ನ ವೈಭವವನ್ನು ಕಳೆದುಕೊಳ್ಳಲಿದೆ ಅಥವಾ ಅದು ಧರ್ಮವಾಗಿ ಉಳಿಯುವುದಿಲ್ಲ ಎಂದೇನೂ ಅಲ್ಲ' ಎಂದು ಹೇಳಿತು.

