ನವದೆಹಲಿ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನದ ಶ್ರೀ ಬಾಂಕೆ ಬಿಹಾರಿ ದೇಗುಲದ ದೇಣಿಗೆ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ದೇವಸ್ಥಾನಕ್ಕೆ ದೇಣಿಗೆಯಾಗಿ ಬರುವ ಪ್ರತಿಯೊಂದು ಪೈಸೆಯೂ ನೇರವಾಗಿ ದೇವಸ್ಥಾನದ ಹುಂಡಿಗೆ ಸೇರಬೇಕು ಅಥವಾ ಆನ್‌ಲೈನ್ ಮೂಲಕ ದೇವಸ್ಥಾನದ ನಿಧಿಗೆ ಸಂದಾಯವಾಗಬೇಕು' ಎಂದು ತಾಕೀತು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನೊಳಗೊಂಡ ಪೀಠವು, ವಕೀಲ ಮಣೀಂದರ್ ಸಿಂಗ್ ಅವರು ಸಲ್ಲಿಸಿದ, ದೇವಸ್ಥಾನದ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಪರಿಶೀಲಿಸಿತು.
'ದೇಗುಲದ ಖಜಾನೆ ನಿರ್ವಹಣೆಗೆ ಪಾರದರ್ಶಕ ಕಾರ್ಯವಿಧಾನವನ್ನು ಜಾರಿಗೆ ತರುವಂತೆ ದೇವಸ್ಥಾನದ ಮೇಲ್ವಿಚಾರಣೆ ಸಮಿತಿಗೆ ನ್ಯಾಯಪೀಠ ಸೂಚಿಸಿತು.
ವಕೀಲ ಸಿಂಗ್ ಅವರು, ಬಾಂಕೆ ಬಿಹಾರಿ ದೇವಸ್ಥಾನದ ದೇಣಿಗೆ ಪೆಟ್ಟಿಗೆಯ (ಗೋಲಕ್) ಮುಂದೆ ಭಕ್ತರಿಂದ ನೇರವಾಗಿ ದೇಣಿಗೆ ಹಣ ಸಂಗ್ರಹಿಸಿ ಅದನ್ನು ಅಧಿಕೃತ ಹುಂಡಿಗೆ ಹಾಕುವ ಬದಲು ಪಾಲಿಥಿನ್ ಚೀಲಗಳಲ್ಲಿ ಹಾಕುತ್ತಿರುವ ವ್ಯಕ್ತಿಗಳನ್ನು ತೋರಿಸುವ ಛಾಯಾಚಿತ್ರಗಳು ಮತ್ತು ವಿಡಿಯೊ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದು ಅತ್ಯಂತ ಗಂಭೀರವಾದ ವಿಷಯ, ತುರ್ತು ಗಮನಹರಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
'ದೇವಸ್ಥಾನದೊಂದಿಗೆ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿಯು ದೇವಸ್ಥಾನದ ಖಜಾನೆಗೆ ಜಮಾ ಮಾಡುವ ಮೊದಲು ದೇಣಿಗೆ ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಸೇವಾಯತ್‌ಗಳು (ದೇವಾಲಯದ ಸೇವಕರು/ಪುರೋಹಿತರು) ಅಥವಾ ಇತರರು ಈ ಕಾರ್ಯವಿಧಾನಕ್ಕೆ ಅಡ್ಡಿಪಡಿಸಲು ಮಾಡುವ ಯಾವುದೇ ಪ್ರಯತ್ನವನ್ನು ನ್ಯಾಯಾಲಯವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ' ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
ಠಾಕೂರ್ ಶ್ರೀ ಬಂಕೆ ಬಿಹಾರಿ ಜಿ ಮಹಾರಾಜ್ ದೇವಸ್ಥಾನದ ಆಡಳಿತ ಸಮಿತಿ ಸಲ್ಲಿಸಿರುವ ಮನವಿಗಳ ಕುರಿತು ಪೀಠವು ವಿಚಾರಣೆ ನಡೆಸುತ್ತಿದೆ.

