ನವದೆಹಲಿ: ಪಕ್ಷೇತರ ಸಂಸದ ಪಪ್ಪು ಯಾದವ್ ಅವರ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ.
ಸಂಸತ್ತಿನ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಪ್ಪು ಯಾದವ್ ಸೇರಿದಂತೆ ಮೂವರ ವಿರುದ್ಧ ವಾರಾಣಸಿಯಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಈ ಘಟನೆ ನಡೆದಿದೆ.
ದೆಹಲಿಯಲ್ಲಿರುವ ತಮ್ಮ ನಿವಾಸದ ಬಳಿ ಯಾದವ್ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ, ಬಂದ ವ್ಯಕ್ತಿಯೊಬ್ಬ, 'ನೀವು ನಮ್ಮ ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡುತ್ತಿದ್ದೀರಿ' ಎಂದು ಕೂಗಿ, ಅವರತ್ತ ಶೂ ಎಸೆದಿದ್ದಾನೆ. ತಕ್ಷಣವೇ ಜಾಗೃತರಾದ ಯಾದವ್ ಬೆಂಬಲಿಗರು ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಆ ವ್ಯಕ್ತಿಯ ಬಳಿ ಚಾಕು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಹತ್ಯೆಗೆ ಯತ್ನ
ಘಟನೆ ಬಳಿಕ ಮಾತನಾಡಿದ ಪಪ್ಪು ಯಾದವ್, ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ನನ್ನನ್ನು ಕೊಲ್ಲಲು ಯತ್ನಿಸಲಾಯಿತು. ಅಲ್ಲಿದ್ದ ಕೆಲವರು 'ಇವನನ್ನು ಜೀವಂತವಾಗಿ ಸುಟ್ಟುಹಾಕಿ, ಕೊಂದು ಹಾಕಿ' ಎಂದು ಕೂಗುತ್ತಿದ್ದರು. ಬೆಂಬಲಿಗರು ಸ್ಥಳದಲ್ಲಿ ಇಲ್ಲದಿದ್ದರೆ ನನ್ನ ಕಥೆ ಮುಗಿಯುತ್ತಿತ್ತು ಎಂದಿದ್ದಾರೆ.

