ಚೆನ್ನೈ: 'ಯಾರೇ ಆಗಲಿ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗೆ ಬೆಂಬಲಿಸಿದರೆ ಅವರು ತಮಿಳುನಾಡಿನ ಭವಿಷ್ಯಕ್ಕೆ ದ್ರೋಹ ಬಗೆದಂತೆ. ಅಷ್ಟು ಮಾತ್ರವಲ್ಲ, ಅವರು ರಾಜ್ಯದ ಜನರ ಮೇಲೆ ದಾಳಿ ನಡೆಸುವುದಕ್ಕೆ ಬಿಜೆಪಿಗೆ ಅವಕಾಶ ಮಾಡಿಕೊಟ್ಟಂತೆಯೂ ಆಗಲಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಕೆಲ ಷರತ್ತುಗಳಿಗೆ ಒಳಪಟ್ಟು, ಕ್ಷೇತ್ರಗಳ ಮರುವಿಂಗಡಣೆ ಕುರಿತ ಮಸೂದೆಗೆ ಸಂಸತ್‌ನಲ್ಲಿ ಬೆಂಬಲಿಸಲು ಮುಂದಾಗಿರುವ ಡಿಎಂಕೆ ಪಕ್ಷಕ್ಕೆ ಅವರು ಈ ಮೂಲಕ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇಲ್ಲಿನ ಮಾಮಲ್ಲಪುರದ ರೆಸಾರ್ಟ್‌ವೊಂದರಲ್ಲಿ, ಪಕ್ಷದ ಜಿಲ್ಲಾ ಘಟಕಗಳ ನೂತನ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್‌ನೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣದಿಂದ ಡಿಎಂಕೆ ಪಕ್ಷವು 'ಇಂಡಿಯಾ' ಒಕ್ಕೂಟದಿಂದ ಹೊರನಡೆದಿದೆ. ಈ ಕಾರಣಕ್ಕೆ ರಾಹುಲ್ ಗಾಂಧಿ ಅವರ ಈ ಮಾತಿಗೆ ಮಹತ್ವ ಬಂದಿದೆ.
ಬ್ರಿಟಿಷರ ವಿರುದ್ಧ ಹೋರಾಡಿದ್ದ ತಿರುನೆಲ್ವೇಲಿ ರಾಜ ವೀರಪಾಂಡ್ಯನ್ ಕಟ್ಟಬೊಮ್ಮನ್‌ಗೆ ದ್ರೋಹ ಬಗೆದಿದ್ದ ಎನ್ನಲಾದ ಎಟ್ಟಪ್ಪನ್ ಎಂಬ ವ್ಯಕ್ತಿಯ ಹೆಸರು ಪ್ರಸ್ತಾಪಿಸಿದ ರಾಹುಲ್,'ಕ್ಷೇತ್ರ ಮರುವಿಂಗಡಣೆ ಮಸೂದೆ ಬೆಂಬಲಿಸುವವರು ಯಾರೇ ಆಗಲಿ ಅವರು 21ನೇ ಶತಮಾನದ ಎಟ್ಟಪ್ಪನ್ ಇದ್ದಂತೆ' ಎಂದು ಹೇಳಿದರು.
'ತಮಿಳುನಾಡು ಜನರ ಮತದಾನ ಹಕ್ಕನ್ನು ಕಸಿಯುವ ಉದ್ದೇಶದಿಂದ ಬಿಜೆಪಿಯು ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದೆ. ಬಿಜೆಪಿಯ ಈ ಪಿತೂರಿಯನ್ನು ಪ್ರತಿಯೊಬ್ಬ ತಮಿಳು ವ್ಯಕ್ತಿ ವಿರೋಧಿಸಬೇಕು. ರಾಜ್ಯದ ಪ್ರತಿಯೊಂದು ತಮಿಳು ಪಕ್ಷ ಹಾಗೂ ರಾಷ್ಟ್ರೀಯ ಪಕ್ಷಗಳು ಸಂಸತ್ತಿನಲ್ಲಿ ಈ ಮಸೂದೆಯನ್ನು ಸೋಲಿಸಬೇಕು' ಎಂದರು.
Cut-off box - ಕಾಂಗ್ರೆಸ್‌ಗೆ ತಿರುಗೇಟು: ಡಿಎಂಕೆ ತಂತ್ರ? ಡಿಎಂಕೆ ಪಕ್ಷವು ಕ್ಷೇತ್ರಗಳ ಮರುವಿಂಗಡಣೆ ಮಸೂದೆಯನ್ನು ಕಳೆದ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ವಿರೋಧಿಸಿತ್ತು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಟ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪ್ರಚಂಡ ಗೆಲುವು ಸಾಧಿಸಿದ್ದರಿಂದ ಡಿಎಂಕೆ ಭಾರಿ ಮುಖಭಂಗ ಅನುಭವಿಸಿತ್ತು. ನಂತರ ಡಿಎಂಕೆ ಜೊತೆಗಿನ ಮೈತ್ರಿಯನ್ನು ತೊರೆದ ಕಾಂಗ್ರೆಸ್ ಟಿವಿಕೆ ಜೊತೆ ಸೇರಿ ಸರ್ಕಾರದ ಭಾಗವಾಯಿತು. ಇದು ಡಿಎಂಕೆ ಸಿಟ್ಟಿಗೆ ಕಾರಣವಾಗಿದೆ. 'ಕಾಂಗ್ರೆಸ್ ತನ್ನ ಬೆನ್ನಿಗೆ ಚೂರಿ ಹಾಕಿದೆ' ಎಂದು ಆರೋಪಿಸುತ್ತಿರುವ ಡಿಎಂಕೆ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಸಲುವಾಗಿಯೇ ಈ ಮಸೂದೆಗೆ ಬೆಂಬಲಿಸಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ ಡಿಎಂಕೆ ಪಕ್ಷವು ಬಿಜೆಪಿ ಜೊತೆ ಕೈಜೋಡಿಸುವುದನ್ನು ತಪ್ಪಿಸುವ ಉದ್ದೇಶದಿಂದ ರಾಹುಲ್ ಈ ಮಾತು ಹೇಳಿದ್ದಾರೆ ಎಂದೂ ಹೇಳಲಾಗುತ್ತಿದೆ.

