ಬದಿಯಡ್ಕ: ವೀಣಾವಾದಿನಿ ಸಂಗೀತ ವಿದ್ಯಾಪೀಠದ ವತಿಯಿಂದ ಓಣಂ ಆಚರಣೆ ವೀಣಾವಾದಿನಿಯ ಹಿತೈಷಿಗಳು ಮತ್ತು ಗುರು ಪೆರ್ಲ ಕೃಷ್ಣ ಭಟ್ ಸಂಸ್ಮರಣ ಕಾರ್ಯಕ್ರಮ ಮತ್ತು ಬಳ್ಳಪದವು ಮಾಧವ ಉಪಾಧ್ಯಾಯ ಸಂಸ್ಮರಣ ಸತ್ಸಂಗೀತ ಕಾರ್ಯಕ್ರಮ ಬಳ್ಳಪದವು ವೀಣಾವಾದಿನಿಯಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಸಿ.ಎ. ಬಾಲಮುರಳಿ ಕೊಮ್ಮುಂಜೆ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ, ಗುರು ಪೆರ್ಲ ಕೃಷ್ಣ ಭಟ್ ಅವರ ವ್ಯಕ್ತಿತ್ವದ ಸಚಿತ್ರಣವನ್ನು ಪರಿಚಯಿಸಿ ಶುಭಾಶಂಸನೆಗೈದರು.
ರಾಜಾರಾಮ್ ಪೆರ್ಲ, ವೀಣಾವಾದಿನಿ ಸಂಸ್ಥಾಪಕ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಉಪಸ್ಥಿತರಿದ್ದರು. ಸತ್ಸಂಗೀತ ಕಾರ್ಯಕ್ರಮದಲ್ಲಿ ವೀಣಾವಾದಿನಿಯ ವಿದ್ಯಾರ್ಥಿನಿ ಕುಮಾರಿ ಮಾನಸಿ ಮತ್ತು ಮತ್ತು ಆಕಾಶವಾಣಿ ಕಲಾವಿದೆ ಪಲ್ಲವಿ ರಾವ್ ಸುರತ್ಕಲ್ ಇವರಿಂದ ಸಂಗೀತಾರ್ಚನೆ ನೆರವೇರಿತು. ಮೃದಂಗದಲ್ಲಿ ಮಾ.ಆಶ್ಲೇಶ್, ವಯಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ, ಘಟಂನಲ್ಲಿ ವಿಶ್ವಾಸ್ ಪದ್ಯಾಣ ಸಹಕರಿಸಿದರು. ಓಣಂ ಪ್ರಯುಕ್ತ ಹೂವಿನ ರಂಗೋಲಿಯನ್ನು ರಚಿಸಿ ತಿರುವಾದಿರಕ್ಕಳಿ ಪ್ರಸ್ತುತಪಡಿಸಲಾಯಿತು. ಕೇರಳದ ವಿಶೇಷ ಖಾದ್ಯಗಳನ್ನೊಳಗೊಂಡ ಓಣಂ ಭೋಜನ ಏರ್ಪಡಿಸಲಾಗಿತ್ತು.

.jpg)
.jpg)
