ಕುಂಬಳೆ: ಸಂಚರಿಸುತ್ತಿದ್ದ ಆಟೋ ರಿಕ್ಷಾದೊಳಗೆ ಹಾವೊಂದು ಚಾಲಕನ ದೇಹಕ್ಕೆ ಸುತ್ತಿಕೊಂಡಿದ್ದು, ಚಾಲಕ ತಕ್ಷಣ ರಿಕ್ಷಾ ನಿಲ್ಲಿಸಿ ಕೆಳಗಿಳಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ನಂತರ ಉರಗತಜ್ಞರು ಆಗಮಿಸಿ ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ವೈಪಳಿಕೆ ಚೇವಾರಿನಲ್ಲಿ ಘಟನೆ ನಡೆದಿದೆ. ಆಟೋ ರಿಕ್ಷಾ ಚಾಲಕ ಪಿಯೂಸ್ ಡಿ'ಸೋಜಾ ಅವರು ಇಬ್ಬರು ಪ್ರಯಾಣಿಕರನ್ನು ಸುಬ್ಬಯ್ಯಕಟ್ಟೆಗೆ ಕರೆದೊಯ್ಯುತ್ತಿರುವ ಮಧ್ಯೆ, ಪಿಯೂಸ್ ಡಿ'ಸೋಜಾರ ಅವರ ಕೈಗೆ ಯಾವುದೋ ಜೀವಿ ಹತ್ತಿದ ಅನುಭವವುಂಟಾಗಿ ಕೈಕೊಡವಿದಾಗ ಹಾವೊಂದು ಕೆಳಗೆ ಬಿದ್ದಿದ್ದು, ಆಟೋರಿಕ್ಷಾದ ಹ್ಯಾಂಡಲ್ ಸಂದಿಗೆ ಸೇರಿಕೊಂಡಿತ್ತು. ನಂತರ ಉರಗತಜ್ಞ ಚೇವಾರಿನ ಸುಬೈರ್ ಎಂಬವರು ಸ್ಥಳಕ್ಕಾಗಮಿಸಿ ಹ್ಯಾಂಡಲ್ ಸಂದಿಯಿಂದ ಹಾವನ್ನು ಹೊರತೆಗೆದಿದ್ದಾರೆ. ಅಲ್ಪ ಪ್ರಮಾಣದ ವಿಷ ಒಳಗೊಂಡ ಹಾವು ಇದಾಗಿತ್ತು ಎಂದು ಸುಬೈರ್ ತಿಳಿಸಿದ್ದಾರೆ.
ಹಾವು ಮೈಮೇಲೆ ಹರಿದಾಡಿರುವುದರಿಂದ ವಿಚಲಿತಗೊಳ್ಳದೆ ಸುರಕ್ಷಿತವಾಗಿ ರಿಕ್ಷಾ ನಿಲುಗಡೆಗೊಳಿಸಿದ ಪಿಯೂಸ್ ಡಿ'ಸೋಜಾ ಅವರ ಚಾಕಚಕ್ಯತೆ ಪ್ರಶಂಸೆಗೂ ಕರಣವಾಯಿತು.

