ಟೋಕಿಯೊ (PTI): ಭಾರತ ಮತ್ತು ಜಪಾನ್ ನಡುವಿನ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಇರುವ ಮಾರ್ಗಗಳ ಕುರಿತು ಚರ್ಚಿಸಲು 200 ಉದ್ಯಮಿಗಳ ನಿಯೋಗವೊಂದು ಜಪಾನ್‌ಗೆ ತೆರಳಲಿದೆ. ನಿಯೋಗದ ನೇತೃತ್ವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ವಹಿಸಿದ್ದಾರೆ.
ಈ ನಿಯೋಗವು ಸೋಮವಾರ ದಿಂದ ನಾಲ್ಕು ದಿನ ಜಪಾನ್‌ಗೆ ತೆರಳಲಿದೆ. ಮುಂದಿನ ಒಂದು ದಶಕದಲ್ಲಿ ಭಾರತದಲ್ಲಿ ₹60 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಕಳೆದ ವರ್ಷ ಜಪಾನ್ ಹೇಳಿತ್ತು.
'ಈ ನಿಯೋಗವು ತಯಾರಿಕೆ, ಸೆಮಿಕಂಡಕ್ಟರ್, ಶುದ್ಧ ಇಂಧನ, ಉಕ್ಕು, ವಾಹನೋದ್ಯಮ, ಹಣಕಾಸು ಸೇವೆಗಳು, ಆರೋಗ್ಯ, ನವೋದ್ಯಮ ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳನ್ನು ಒಳಗೊಂಡಿದೆ' ಎಂದು ಎಫ್‌ಐಸಿಸಿಐನ ಪ್ರಧಾನ ನಿರ್ದೇಶಕಿ ಜ್ಯೋತಿ ವಿಜ್ ತಿಳಿಸಿದ್ದಾರೆ.
ಗೋಯಲ್ ಅವರು ಭೇಟಿ ವೇಳೆ ಜಪಾನ್‌ನ ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕೆಗಳ ಸಚಿವ ಅಕಾಜಾವಾ ರೈಯೋಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಟೋಕಿಯೊದಲ್ಲಿ ಸಚಿವರು, ಜಪಾನ್‌ನ ಪ್ರಮುಖ ಕಂಪನಿಗಳು ಮತ್ತು ಕೈಗಾರಿಕೆಗಳ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಜೊತೆಗೆ ಜಪಾನ್‌ನ ವ್ಯಾಪಾರ ಒಕ್ಕೂಟವಾದ ಕೀಡಾನ್ರೆನ್ ಜೊತೆ ದುಂಡು ಮೇಜಿನ ಸಭೆ ನಡೆಸಲಿದ್ದಾರೆ. ಈ ಒಕ್ಕೂಟವು ಜಪಾನ್‌ನ 1,500ಕ್ಕೂ ಹೆಚ್ಚು ಕಂಪನಿಗಳನ್ನು ಪ್ರತಿನಿಧಿಸುತ್ತದೆ.
ಈ ಭೇಟಿಯು ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ. ಉನ್ನತ ತಂತ್ರಜ್ಞಾನ ಮತ್ತು ಮುಂದಿನ ಪೀಳಿಗೆಯ ಕೈಗಾರಿಕೆಗಳಲ್ಲಿ ಸಹಕಾರದ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

