HEALTH TIPS

ಪಿಯೂಷ್ ಗೋಯಲ್‌ಗೆ ಖಜಾಂಚಿ ಹೊಣೆ: ಕೇಂದ್ರ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ?

ನವದೆಹಲಿ: ನಿತಿನ್ ನವೀನ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಲವು ತಿಂಗಳ ನಂತರ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಸೋಮವಾರ ಘೋಷಿಸಿದೆ. 


ಈ ಹೊಸ ತಂಡದಲ್ಲಿ ಹಳೆಯ ಮುಖಗಳು, ಹಿರಿಯರು ಹಾಗೂ ಯುವಕರು ಸ್ಥಾನ ಪಡೆದುಕೊಂಡಿದ್ದಾರೆ. 

ಪ್ರಮುಖ ಹಿರಿಯ ನಾಯಕರು ಮತ್ತೆ ಪಕ್ಷದ ಕೇಂದ್ರ ಸಂಘಟನೆಗೆ ಮರಳಿದ್ದಾರೆ. ಆದರೆ, ಇದರಲ್ಲಿನ ಒಂದು ನೇಮಕ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೇಂದ್ರ ಸಚಿವರಾಗಿರುವ ಪಿಯೂಷ್ ಗೋಯಲ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಖಜಾಂಚಿಯನ್ನಾಗಿ ನೇಮಿಸಲಾಗಿದೆ.

ಪಿಯೂಷ್ ಗೋಯಲ್ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಕ್ಷದ ಸಂಘಟನಾತ್ಮಕ ಹುದ್ದೆಗೆ ಗೋಯಲ್ ಅವರನ್ನು ನೇಮಿಸಿರುವುದು, ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಪುನರ್‌ರಚನೆ ಮಾಡಲಿದ್ದು ಗೋಯಲ್ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಊಹಾಪೋಹಗಳಿಗೆ ಈ ಬೆಳವಣಿಗೆ ಪುಷ್ಠಿ ನೀಡಿದೆ.

ಮತ್ತೊಂದು ಮುಖ್ಯವಾದ ವಿಚಾರ, ಬಿಜೆಪಿ ಪಾಲಿಸಿಕೊಂಡು ಬಂದಿರುವ 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ಎಂಬ ನಿಯಮ. ಪಕ್ಷದ ನಿಯಮದಂತೆ ನಾಯಕರುಗಳು ಸರ್ಕಾರ ಅಥವಾ ಸಂಘಟನೆ ಎರಡರಲ್ಲಿ ಒಂದರಲ್ಲಷ್ಟೇ ಪ್ರಮುಖ ಜವಾಬ್ದಾರಿ ಹೊಂದಿರಬೇಕು. ಹೀಗಾಗಿ ಗೋಯಲ್ ನೇಮಕ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಆದರೆ, ಗೋಯಲ್ ಅವರನ್ನು ವಾಣಿಜ್ಯ ಸಚಿವ ಸ್ಥಾನದಿಂದ ತೆಗೆದುಹಾಕಲಾಗುತ್ತದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಪಕ್ಷದ ಅತ್ಯಂತ ಮಹತ್ವದ ಹುದ್ದೆಗೆ ಅನುಭವಿಯಾದ ನಾಯಕನನ್ನು ಬಳಸಿಕೊಳ್ಳುವ ತಂತ್ರವೂ ಇದಾಗಿರಬಹುದು. ಅಲ್ಲದೆ, ಅಮೆರಿಕದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಪ್ರಸ್ತುತ ಮಾತುಕತೆಯನ್ನು ಗೋಯಲ್ ಅವರೇ ಮುನ್ನಡೆಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕಿದೆ.

ಪಿಯೂಷ್ ಗೋಯಲ್ ನೇಮಕ ನೀಡುವ ಸುಳಿವೇನು?

ಬಿಜೆಪಿ ಸಂಘಟನೆಗೆ ಪಿಯೂಷ್ ಗೋಯಲ್ ಹೊಸಬರೇನೂ ಅಲ್ಲ. ಅವರು ಈ ಹಿಂದೆ ಕೂಡ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದು, ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಪ್ರಸ್ತುತ ಸಂಪುಟದಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಮೋದಿ ಸರ್ಕಾರದ ಆರ್ಥಿಕ ಕಾರ್ಯಸೂಚಿಯ ಕೇಂದ್ರಬಿಂದುವಾಗಿರುವ ಅವರು ವ್ಯಾಪಾರ, ಹೂಡಿಕೆ, ರಫ್ತು ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಮುನ್ನಡೆಯ ಹೊಣೆಗಾರಿಕೆ ಹೊತ್ತಿದ್ದಾರೆ.

ಗೋಯಲ್ ಮುಂದಾಳತ್ವದಲ್ಲಿ ಭಾರತವು ಇತ್ತೀಚಿನ ವರ್ಷಗಳಲ್ಲಿ 9 ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಅಂತಿಮಗೊಳಿಸಿದೆ. ಯುರೋಪಿಯನ್ ದೇಶಗಳು, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೇರಿದಂತೆ 38 ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಈ ಒಪ್ಪಂದಗಳು ನಡೆದಿವೆ.

ಸಂಪುಟ ಪುನರ್‌ರಚನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ...

ಮೋದಿ ಸಂಪುಟ ಪುನರ್‌ರಚನೆ ಕುರಿತಾದ ಊಹಾಪೋಹಗಳು ಹಲವು ತಿಂಗಳುಗಳಿಂದ ಕೇಳಿಬರುತ್ತಿದ್ದವು. ಆದರೆ ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ವಿದ್ಯಾರ್ಥಿ ಚಳವಳಿ ಕಾರಣದಿಂದ ಸಂಪುಟ ಪುನಾರಚನೆ ಮುಂದೂಡಲ್ಪಟ್ಟಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಈಗಿನ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ಆ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸದ್ಯಕ್ಕೆ ಗೋಯಲ್ ಮೋದಿ ಸಂಪುಟದಿಂದ ನಿರ್ಗಮಿಸುತ್ತಾರೆ ಎಂಬುದಕ್ಕೆ ಯಾವುದೇ ಅಧಿಕೃತ ಸುಳಿವುಗಳಿಲ್ಲ. ಹಿಂದಿನ ನಡ್ಡಾ ಅವರ ಉದಾಹರಣೆಯನ್ನು ನೋಡಿದರೆ, ಬಿಜೆಪಿ ನಾಯಕರಿಗೆ ಏಕಕಾಲದಲ್ಲಿ ಸರ್ಕಾರಿ ಮತ್ತು ಸಂಘಟನೆ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ನೀಡಿರುವ ನಿದರ್ಶನಗಳೂ ಇವೆ.

ಆದರೆ, ನಿತಿನ್ ನವೀನ್ 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ, ಗೋಯಲ್ ಅವರ ಈ ಹೊಸ ಜವಾಬ್ದಾರಿ ಸಚಿವ ಸ್ಥಾನದ ಮೇಲೆ ಪರಿಣಾಮ ಬೀರಬಹುದು. ಈ ಬೆಳವಣಿಗೆ ಮುಂಬರುವ ಸಂಪುಟ ಪುನಾರಚನೆಯ ಮೊದಲ ಮುನ್ಸೂಚನೆಯೋ ಎಂಬುದನ್ನು ಕಾದುನೋಡಬೇಕಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries