ಚೆನ್ನೈ(PTI): ನದಿಗಳ ನೀರು ಹಂಚಿಕೆ ವಿಚಾರವಾಗಿ ರಾಜ್ಯಗಳ ನಡುವಿನ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಲಹೆ ನೀಡಿದರು.
ಸಮೀಪದ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಸಚಿವ ಶಾ ಅವರ ಈ ಸಲಹೆಗೆ ದಕ್ಷಿಣದ ರಾಜ್ಯಗಳು ಬೆಂಬಲ ಸೂಚಿಸಿದವು.
'ಬಾಕಿ ಇರುವ ನದಿ ನೀರು ವಿವಾದಗಳನ್ನು ಆದಷ್ಟು ತ್ವರಿತವಾಗಿ ಬಗೆಹರಿಸಬೇಕು. ಕೇಂದ್ರ ಜಲ ಶಕ್ತಿ ಹಾಗೂ ಗೃಹ ವ್ಯವಹಾರಗಳ ಸಚಿವರು, ಅಂತರರಾಜ್ಯ ಪರಿಷತ್ತು ಹಾಗೂ ಸಂಬಂಧಪಟ್ಟ ರಾಜ್ಯಗಳ ಪ್ರತಿನಿಧಿಗಳ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕು' ಎಂದು ಸಚಿವ ಶಾ ಪ್ರತಿಪಾದಿಸಿದರು.
'ರಾಜ್ಯಗಳು ತಮ್ಮ ಹಿತಾಸಕ್ತಿಗಳ ರಕ್ಷಣೆ ಮಾಡುವುದು ತಪ್ಪಲ್ಲ. ಆದರೆ, ಇಂತಹ ಪ್ರಕ್ರಿಯೆಯಿಂದ ರಾಜ್ಯಗಳು ಹಲವು ವರ್ಷಗಳ ಕಾಲ ತಮ್ಮ ಪಾಲಿನ ನೀರಿನಿಂದ ವಂಚಿತವಾಗಬಾರದು. ರಾಜ್ಯಗಳ ನಡುವಿನ ವ್ಯಾಜ್ಯಗಳಿಂದಾಗಿ ನೀರು ಸದ್ಬಳಕೆಯಾಗದೇ ಸಮುದ್ರ ಸೇರುತ್ತದೆ. ಹೀಗಾದಾಗ ಯಾವ ರಾಜ್ಯದ ಉದ್ದೇಶವೂ ಈಡೇರಿದಂತಾಗುವುದಿಲ್ಲ' ಎಂದು ಶಾ ಹೇಳಿದರು.
'ಬ್ರಹ್ಮಪುತ್ರ, ಕಾವೇರಿ ಹಾಗೂ ಗೋದಾವರಿ ನದಿಗಳ ಜೋಡಣೆಯಿಂದ ಭಾರತ ಮುಂದಿನ 100 ವರ್ಷ ನೀರಿನ ಕೊರತೆ ಎದುರಿಸುವುದಿಲ್ಲ. ಈ ಯೋಜನೆಯಿಂದ ಅನೇಕ ಜಲಮಾರ್ಗಗಳ ಸೃಷ್ಟಿಯಾಗಲಿದೆ. ಇದರಿಂದ ಇಂಧನ ಉಳಿತಾಯ ಮಾತ್ರವಲ್ಲ ಪರಿಸರ ಸಂರಕ್ಷಣೆ ಹಾಗೂ ಕೈಗೆಟಕುವ ಸಾರಿಗೆ ವ್ಯವಸ್ಥೆಯೂ ಸಾಧ್ಯವಾಗಲಿದೆ' ಎಂದು ವಿವರಿಸಿದರು.
'ನದಿ ನೀರು ಹಂಚಿಕೆಗೆ ಸಂಬಂಧಿಸಿ ಉತ್ತರ ಭಾರತದಲ್ಲಿ ಬ್ರಿಟಿಷರ ಕಾಲದಿಂದಲೂ ಎಂಟು ವಿವಾದಗಳಿದ್ದವು. ಈ ಪೈಕಿ ಐದು ವಿವಾದಗಳನ್ನು ಸಂಪೂರ್ಣ ಬಗೆಹರಿಸಲಾಗಿದ್ದು, ಐದು ತಿಂಗಳ ಹಿಂದೆ ಅಂತಿಮ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಈಗ, ಈ ವಿಚಾರಕ್ಕೆ ಸಂಬಂಧಿಸಿ ವಿವಾದ ರಹಿತ ಉತ್ತರ ಭಾರತ ಎಂಬುದನ್ನು ಸಾಧಿಸಲಾಗಿದೆ' ಎಂದೂ ಹೇಳಿದರು.

