ತಿರುವನಂತಪುರ: ಉಡಾವಣಾ ವಾಹನಗಳ (ರಾಕೆಟ್) ತಯಾರಿಕೆಯನ್ನು ಖಾಸಗಿ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್ಯು) ಹಸ್ತಾಂತರಿಸುವ ಕೇಂದ್ರ ಸರಕಾರದ ನಿರ್ಧಾರದ ಕಾರ್ಯಸಾಧ್ಯತೆಯನ್ನು ಇಸ್ರೋದ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಪ್ರಶ್ನಿಸಿದ್ದಾರೆ.
ಇಸ್ರೋ ರಾಕೆಟ್ಗಳ ತಯಾರಿಕೆಯನ್ನು ನಿಲ್ಲಿಸಲಿದೆ ಮತ್ತು ಈ ಕೆಲಸವನ್ನು ಖಾಸಗಿ ವಲಯ ಅಥವಾ ಪಿಎಸ್ಯುಗಳೇ ಕೈಗೆತ್ತಿಕೊಳ್ಳಲಿವೆ ಎಂದು ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆಯಂಡ್ ಆಥರೈಸೇಷನ್ ಸೆಂಟರ್ನ ಅಧ್ಯಕ್ಷ ಪವನ್ ಗೋಯೆಂಕಾ ಬಿಸಿನೆಸ್ ಟುಡೇ ಆಯೋಜಿಸಿದ್ದ 'ಇಂಡಿಯಾ @ 100 ಇಕನಾಮಿಕ್ ಸಮಿಟ್'ನಲ್ಲಿ ಹೇಳಿದ ಹಿನ್ನೆಲೆಯಲ್ಲಿ ಮಾಧವನ್ ಅವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಮಾಧವನ್ ಪ್ರಕಾರ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳ ತಯಾರಿಕೆಯಲ್ಲಿ ಉದ್ಯಮ ಕ್ಷೇತ್ರವು ದಶಕಗಳಿಂದ ತೊಡಗಿಸಿಕೊಂಡಿದೆ. ಪ್ರಸ್ತುತ ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿಯಂತಹ ರಾಕೆಟ್ಗಳ ಸುಮಾರು ಶೇ.90ರಷ್ಟು ಕಾರ್ಯವನ್ನು ಈ ಉದ್ಯಮಗಳೇ ನಿರ್ವಹಿಸುತ್ತಿವೆ.
ಆದರೆ ಅಂತಿಮ ಜೋಡಣೆ ಸಂಯೋಜನೆ, ಪರೀಕ್ಷೆ ಮತ್ತು ಉಡಾವಣೆಯನ್ನು ಇಸ್ರೋವೇ ನಿರ್ವಹಿಸುತ್ತದೆ. ಇವು ಅತ್ಯಂತ ನಿರ್ಣಾಯಕ ಕಾರ್ಯಗಳಾಗಿದ್ದು, ಈ ಕ್ಷೇತ್ರದಲ್ಲಿ ಅನುಭವ ಅಥವಾ ಪರಿಣತಿ ಇಲ್ಲದ ಕೈಗಾರಿಕಾ ಸಂಸ್ಥೆಗಳಿಗೆ ಈ ಜವಾಬ್ದಾರಿಯನ್ನು ವಹಿಸಲು ಸಾಧ್ಯವಿಲ್ಲ ಎಂದು ಮಾಧವನ್ ವಾದಿಸಿದರು.
ಸ್ವತಂತ್ರವಾಗಿ ಇಂತಹ ಬೃಹತ್ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಿರುವ ಹೂಡಿಕೆಯನ್ನು ಮಾಡಲು ಖಾಸಗಿ ಕಂಪನಿಗಳು ಸಿದ್ಧವಿವೆಯೇ ಎಂದು ಪ್ರಶ್ನಿಸಿದ ಮಾಧವನ್, ಇಸ್ರೋದಂತಹ ಸಂಸ್ಥೆಯನ್ನು ಸ್ಥಾಪಿಸಲು ಇಂದಿನ ದಿನಗಳಲ್ಲಿ ಸುಮಾರು 50,000 ಕೋಟಿ ರೂ. ವೆಚ್ಚವಾಗುತ್ತದೆ. ಆದರೆ ಅದರಿಂದ ಬರುವ ಆದಾಯವು ಕೇವಲ ಕೆಲವೇ ಸಾವಿರ ಕೋಟಿಗಳಷ್ಟು ಮಾತ್ರ ಎಂದು ಅವರು ಹೇಳಿದರು. ಹೀಗಿರುವಾಗ ಅತ್ಯಂತ ಕನಿಷ್ಠ ಲಾಭಾಂಶವಿರುವ ಇಂತಹ ಯೋಜನೆಗೆ ಬೃಹತ್ ಮೊತ್ತದ ಹೂಡಿಕೆ ಮಾಡಲು ಯಾವ ಉದ್ಯಮ ತಾನೇ ಮುಂದೆ ಬರುತ್ತದೆ? ಹೀಗಾಗಿ ಇದೊಂದು ದೊಡ್ಡ ಪ್ರಶ್ನೆಯಾಗಿದೆ ಎಂದರು.
'ರಾಕೆಟ್ಗಳ ತಯಾರಿಕೆಯನ್ನು ಕೈಗಾರಿಕಾ ಕ್ಷೇತ್ರಕ್ಕೆ ಹಸ್ತಾಂತರಿಸುವ ಪ್ರಯತ್ನಗಳು ವರ್ಷಗಳಿಂದಲೂ ನಡೆಯುತ್ತಿವೆ. ಪಿಎಸ್ಎಲ್ವಿ ಯಶಸ್ವಿ ಉಡಾವಣೆಯ ನಂತರ ಈ ತಯಾರಿಕೆಯನ್ನು ಉದ್ಯಮ ರಂಗಕ್ಕೆ ಹಸ್ತಾಂತರಿಸಲು ನಾವು ಬಯಸಿದ್ದೆವು. ಆದರೆ ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ' ಎಂದು ಅವರು ಹೇಳಿದರು.
'ಪ್ರಸ್ತುತ ವ್ಯವಸ್ಥೆಯಡಿಯಲ್ಲಿ, ಇಸ್ರೋದ ವಾಣಿಜ್ಯ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಲಾರ್ಸನ್ ಆಯಂಡ್ ಟೂಬ್ರೊ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ನೊಂದಿಗೆ ಸೇರಿ ಪಿಎಸ್ಎಲ್ವಿ ತಯಾರಿಸುತ್ತಿದೆ. ಆದರೆ ಇದರ ನಿರ್ಣಾಯಕ ತಂತ್ರಜ್ಞಾನವು ಇಂದಿಗೂ ಇಸ್ರೋ ಬಳಿಯೇ ಇದೆ. ಸುಮಾರು 20 ವರ್ಷಗಳ ನಿರಂತರ ಪ್ರಯತ್ನದ ನಂತರ ನಾವೀಗ ಈ ಹಂತವನ್ನು ತಲುಪಿದ್ದೇವೆ' ಎಂದು ಮಾಧವನ್ ಹೇಳಿದರು.
ರಾಕೆಟ್ಗಳ ತಯಾರಿಕೆಯ ವರ್ಗಾವಣೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ವಿಶಾಲ ಯೋಜನೆಯ ಭಾಗವಾಗಿದೆ. ದಿನನಿತ್ಯದ ಉತ್ಪಾದನಾ ಜವಾಬ್ದಾರಿಯನ್ನು ಖಾಸಗಿ ಕ್ಷೇತ್ರಕ್ಕೆ ವಹಿಸಿ,ಇಸ್ರೋವನ್ನು ಸಂಶೋಧನೆ, ವೈಜ್ಞಾನಿಕ ಯೋಜನೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

