ಪೆರ್ಲ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಆ. 30ರಂದು ಬೆಳಗ್ಗೆ 10ಕ್ಕೆ ಪೆರ್ಲ ವ್ಯಾಪಾರಿ ಭವನ ಸಭಾಂಗಣದಲ್ಲಿ ಜರುಗಲಿದೆ.
ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ಅಧ್ಯಕ್ಷ ಬಿ.ಪಿ ಶೇಣಿ ಅಧ್ಯಕ್ಷತೆ ವಹಿಸುವರು. ಪ್ರಸೂತಿ ತಜ್ಞೆ ಡಾ. ಗೀತಾ ಪ್ರಕಾಶ್ ವಿಟ್ಲ ದಿಕ್ಸೂಚಿ ಭಾಷಣ ಮಾಡುವರು. ಸಿಬಿಐ ಬೆಂಗಳೂರು ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಹಾಗೂ ಅಬಕಾರಿ ಅಧಿಕಾರಿ ಜನಾರ್ದನ ನೇರಪ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭ ವಿವಿಧ ರಂಗಗಳಲ್ಲಿ ಗುರುತಿಸಿ ಕೊಂಡ ಸಮಾಜ ಭಾಂಧದವರಿಗೆ ಗೌರವಾರ್ಪಣೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜಯಂತ್ಯುತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿರುವುದು.
ಈ ಸಂದರ್ಭ ಕರಾಟೆ ತರಬೇತುದಾರೆ, ಕಾಸರಗೋಡು ವಾರಿಯರ್ಸ್ ಕರಾಟೆ ಅಕಾಡಮಿಯ ಸೌಮ್ಯಾ ಅವಿನಾಶ್ ಚೆಂಬ್ರಕಾನ ಹಾಗೂ ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಕಾನ ಅವರನ್ನು ಸನ್ಮಾನಿಸಲಾಗುವುದು.

