ಲಂಡನ್: ಪಶ್ಚಿಮ ಯುರೋಪಿನ ಅನೇಕ ಭಾಗಗಳಲ್ಲಿ ಗುರುವಾರ ಮತ್ತೊಮ್ಮೆ ಅಧಿಕ ತಾಪಮಾನ ದಾಖಲಾಗಿದ್ದು, ನಾಗರಿಕರು ತತ್ತರಿಸಿದ್ದಾರೆ.
'ಮಧ್ಯ ಮತ್ತು ಆಗ್ನೇಯ ಬ್ರಿಟನ್‌ನಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಲಿದೆ. ಇದು 2003ರ ಆಗಸ್ಟ್‌ನಲ್ಲಿ ದಾಖಲಾಗಿದ್ದ 38.5 ಡಿಗ್ರಿ ಸೆಲ್ಸಿಯಸ್‌ನ ದಾಖಲೆಯನ್ನು ಮೀರುವ ಸಾಧ್ಯತೆಯೂ ಇದೆ' ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
'ದಾಖಲೆಯ ತಾಪಮಾನವನ್ನು ನಿಭಾಯಿಸಲು ಇಂಗ್ಲೆಂಡ್ ಸಜ್ಜಾಗಿಲ್ಲ. ಹೀಗಾಗಿ, ಕೆಲ ವಾರಗಳು ಜನರಿಗೆ ಅನನುಕೂಲಕರವಾಗಿರಲಿವೆ' ಎಂದು ಹೇಳಿದ್ದಾರೆ.
ಬ್ರಿಟನ್‌ನ ಬಹುತೇಕ ಭಾಗಗಳಲ್ಲಿ ಬರ ಆವರಿಸಿದೆ. ಗೃಹಬಳಕೆ, ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆಯಾಗಿದೆ. ದಕ್ಷಿಣ ಬ್ರಿಟನ್‌ನಲ್ಲಿ ಕಾರುಗಳನ್ನು ಸ್ವಚ್ಛಗೊಳಿಸುವುದು, ಈಜುಕೊಳಗಳಿಗೆ ನೀರು ಭರ್ತಿ ಮಾಡುವುದು ಸೇರಿದಂತೆ ಅನಗತ್ಯ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ.
'ತೀವ್ರ ಶಾಖದಿಂದಾಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ. ನರ್ಸ್‌ಗಳು ಬಳಲಿಕೆಯಿಂದ ಕುಸಿದು ಬೀಳುತ್ತಿದ್ದಾರೆ. ತಲೆಸುತ್ತುವುದು, ಅನಾರೋಗ್ಯದಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ' ಎಂದು ರಾಯಲ್ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ, ಮುಖ್ಯ ಕಾರ್ಯನಿರ್ವಾಹಕ ನಿಕೋಲಾ ರೇಂಜರ್ ತಿಳಿಸಿದ್ದಾರೆ.

