ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ವು ಪಾನ್‌ಮಸಾಲಗೆ ನೂತನ ಪ್ಯಾಕೇಜಿಂಗ್‌ಮಾನದಂಡಗಳನ್ನು ಮಂಗಳವಾರ ಪ್ರಕಟಿಸಿದೆ. ಉತ್ಪನ್ನಗಳ ಪ್ಯಾಕೇಜ್‌ಗೆ ಪ್ಲಾಸ್ಟಿಕ್ ಮುಕ್ತ ಸಾಮಾಗ್ರಿಗಳನ್ನು ಬಳಸಬೇಕು ಹಾಗೂ ಪ್ಲಾಸ್ಟಿಕ್, ಆಲ್ಯೂಮಿನಿಯಂ ಫಾಯಿಲ್ (ಬೆಗಡೆ) ಹಾಗೂ ಲೋಹ ಲೇಪಿತ ವಸ್ತುಗಳನ್ನು ಹೊಂದಿರಬಾರದು ಎಂದು ಸೂಚಿಸಲಾಗಿದೆ.
ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟಗಳ (ಪ್ಯಾಕೇಜಿಂಗ್) ತಿದ್ದುಪಡಿ ನಿಯಮಗಳು 2026ರ ಅಡಿಯಲ್ಲಿ ಹೊಂದಿರುವ ಅಧಿಕಾರಗಳನ್ವಯ ಎಫ್‌ಎಸ್‌ಎಸ್‌ಎಐ ಈ ಅಧಿಸೂಚನೆಯನ್ನು ಹೊರಡಿಸಿದೆ.
ಕೇಂದ್ರ ಆರೋಗ್ಯ ಹಾಗೂ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಎಫ್‌ಎಸ್‌ಎಸ್‌ಎಐನ ನೂತನ ನಿಬಂಧನೆಗಳ ಪ್ರಕಾರ ಪಾನ್ ಮಸಾಲವನ್ನು ಪೇಪರ್, ಪೇಪರ್‌ಬೋರ್ಡ್, ಸೆಲ್ಯುಲೋಸ್ ಅಥವಾ ಇತರ ಪ್ರಕೃತಿ ಜನ್ಯಸಾಮಾಗ್ರಿಗಳ ಮೂಲಕ ಪ್ಯಾಕೇಜ್ ಮಾಡಬಹುದಾಗಿದೆ. ಆದರೆ ಈ ಸಾಮಾಗ್ರಿಗಳೆಲ್ಲವೂ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿರಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಪ್ಯಾಕೇಜಿಂಗ್, ಪೊಲಿಥಿಲೀನ್, ಪೊಲಿಪ್ರೊಪಿಲೆನ್, ಪಾಲಿಸ್ಟರ್, ಪಾಲಿವಿನಿಲ್ ಕ್ಲೋರೈಡ್ (ಪಿವಿಸಿ) ಅಥವಾ ಇತರ ಯಾವುದೇ ಸಿಂಥೆಟಿಕ್ ಪಾಲಿಮರ್‌ಗಳು, ಕೊಪೊಲಿಮರ್ಸ್ ಅಥವಾ ಲ್ಯಾಮಿನೇಟ್‌ಗಳನ್ನು ಹೊಂದಿರಬಾರದೆಂದು ಅಧಿಸೂಚನೆಯಲ್ಲಿ ನಿರ್ದಿಷ್ಟವಾಗಿ ಹೇಳಲಾಗಿದೆ.

