ಶಿಮ್ಲಾ: ಭಾರಿ ಮಳೆಯಿಂದಾಗಿ ಶನಿವಾರ ರಾತ್ರಿ ಕಲ್ಕಾ-ಶಿಮ್ಲಾ ರೈಲು ಮಾರ್ಗದಲ್ಲಿ ಗುಡ್ಡ ಕುಸಿದು ರೈಲು ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆಯಿಂದ ಸಂಪರ್ಕ ಸೇತುವೆಯ ಒಂದು ಭಾಗ ಹಾನಿಗೊಳಗಾಗಿದ್ದು, ರೈಲಿನಲ್ಲಿದ್ದ 391 ಪ್ರಯಾಣಿಕರು ಮತ್ತು 40 ರೈಲು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹರಿಯಾಣದ ಕಲ್ಕಾಗೆ ಕರೆದೊಯ್ಯಲಾಗಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.
ಕೋಟಿ ಮತ್ತು ಘುಮ್ಮನ್ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 57ರ ಬಳಿ ಶನಿವಾರ ರಾತ್ರಿ ಗುಡ್ಡ ಕುಸಿದಿದೆ. ನಿರಂತರ ಮಳೆಯಿಂದಾಗಿ ಈ ಭಾಗದ ರೈಲು ಹಳಿಗೆ ಹಾನಿಯಾಗಿದೆ ಎಂದು ರೈಲ್ವೆ ತಿಳಿಸಿದೆ.
ಶಿಮ್ಲಾ-ಕಲ್ಕಾ ಯುನೆಸ್ಕೊ ವಿಶ್ವ ಪಾರಂಪರಿಕ ರೈಲು ಮಾರ್ಗದ ಈ ವಿಭಾಗದಲ್ಲಿ ಘಟನೆ ಸಂಭವಿಸಿದ ಬಳಿಕ ಉತ್ತರ ರೈಲ್ವೆ ಅಧಿಕಾರಿಗಳು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಐದು ಬಸ್‌ಗಳು ಮತ್ತು ಎರಡು ಟೆಂಪೊ ಟ್ರಾವೆಲರ್‌ಗಳ ಮೂಲಕ 400ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ರೈಲು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಯಿತು. ಸ್ಥಳೀಯ ಪ್ರಯಾಣಿಕರನ್ನು ಅವರವರ ಗಮ್ಯಸ್ಥಾನಗಳಿಗೆ ಕಳುಹಿಸಲಾಯಿತು. ಸುಮಾರು 120 ಪ್ರಯಾಣಿಕರಿಗೆ ವಿಶೇಷವಾಗಿ ಮರುನಿಗದಿಪಡಿಸಲಾದ 13052 ಸಂಖ್ಯೆಯ ರೈಲಿನಲ್ಲಿ ಪ್ರಯಾಣದ ವ್ಯವಸ್ಥೆ ಮಾಡಲಾಯಿತು ಎಂದು ರೈಲ್ವೆ ತಿಳಿಸಿದೆ.
ಘಟನೆಯ ಹಿನ್ನೆಲೆಯಲ್ಲಿ ನಾಲ್ಕು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.

