ಇಂದೋರ್: ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲಿನ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದ್ದು, ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಗಂಟೆಗೆ 110 ಕಿ.ಮೀ ವರೆಗಿನ ವೇಗದಲ್ಲಿ ಚಲಾಯಿಸಲು ಭಾರತೀಯ ರೈಲ್ವೆಯು ಪ್ರಯತ್ನಿಸುತ್ತಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಸತೀಶ್ ಕುಮಾರ್ ತಿಳಿಸಿದ್ದಾರೆ.
ಜುಲೈ 17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹರಿಯಾಣದ 89 ಕಿ.ಮೀ ಉದ್ದದ ಜಿಂದ್-ಸೋನಿಪತ್ ಮಾರ್ಗದಲ್ಲಿ ಸಂಚರಿಸುವ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಚಾಲನೆ ನೀಡಿದ್ದರು.
ಹೈಡ್ರೋಜನ್ ರೈಲಿನ ಚಾಲನೆಯ ವೇಗವನ್ನು ಇದುವರೆಗೆ ಗಂಟೆಗೆ 75 ಕಿ.ಮೀ ಗೆ ನಿಗದಿಪಡಿಸಲಾಗಿತ್ತು. ಇದೀಗ 120 ಕಿ.ಮೀ/ಗಂಟೆ ವೇಗದ ಪರೀಕ್ಷೆಗಳು ಪೂರ್ಣಗೊಂಡಿವೆ. ಹಾಗಾಗಿ, ಇದನ್ನು ಗರಿಷ್ಠ 110 ಕಿ.ಮೀ/ಗಂಟೆ ವೇಗದಲ್ಲಿ ಕಾರ್ಯಾಚರಣೆ ಮಾಡಲು ಈಗ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಹೊಸ ಹೈಡ್ರೋಜನ್ ರೈಲುಗಳನ್ನು ಯಾವ ರೈಲ್ವೆ ವಿಭಾಗಗಳಲ್ಲಿ ಓಡಿಸಬಹುದು ಎಂಬುದನ್ನು ನಿರ್ಧರಿಸಲು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆಗಳು ನಡೆಯುತ್ತಿವೆ. ಜೊತೆಗೆ ತಾಂತ್ರಿಕ ಅಂಶಗಳು ಮತ್ತು ಇಂಧನ ಪೂರೈಕೆಯ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್, ಪ್ರಸ್ತುತ ಹೌರಾ ಮತ್ತು ಗುವಾಹಾಟಿ ನಡುವೆ ಸಂಚರಿಸುತ್ತಿದೆ. ಇನ್ನೂ ಅಂತಹ ನಾಲ್ಕು ರೈಲುಗಳ ನಿರ್ಮಾಣ ಪೂರ್ಣಗೊಂಡಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಲಿವೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 200 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸಲಾಗುತ್ತಿದ್ದು, ಪ್ರತಿಯೊಂದು ರೈಲು ಪೂರ್ಣಗೊಳ್ಳಲು ಸುಮಾರು ಒಂದರಿಂದ ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ. ಈ ವರ್ಷ ಇನ್ನೂ 11 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ. ಅದರೊಂದಿಗೆ ರೈಲುಗಳಲ್ಲಿ ಇಲಿಗಳ ಸಮಸ್ಯೆಯನ್ನು ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

