ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವ್ಯಾಸಂಗ ಕುರಿತು ವಿವರಗಳನ್ನು ಬಹಿರಂಗಪಡಿಸುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ್ದ ನಿರ್ದೇಶನವನ್ನು ರದ್ದುಗೊಳಿಸಿದ್ದ ಆದೇಶ ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರಾಯ್ ಅವರಿದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ. ಕೇಂದ್ರೀಯ ಮಾಹಿತಿ ಆಯೋಗದ (ಸಿಐಸಿ) 2016ರ ನಿರ್ದೇಶನವನ್ನು ರದ್ದುಗೊಳಿಸಿದ ಹಾಗೂ ಕೇಜ್ರಿವಾಲ್ ಅವರಿಗೆ ₹25,000 ದಂಡ ವಿಧಿಸಿದ ತೀರ್ಪನ್ನು ಎತ್ತಿಹಿಡಿದಿದೆ.
ಪ್ರಸ್ತುತ ಪ್ರಕರಣದ ಒಟ್ಟಾರೆ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ಪ್ರಶ್ನಿತ ತೀರ್ಪಿನಲ್ಲಿ ಮೇಲ್ಮನವಿದಾರರ ವಾದಗಳಿಗೆ ಸಂಬಂಧಿಸಿದಂತೆ ಯಾವುದೇ ದೋಷ ಕಂಡುಬರುವುದಿಲ್ಲ. ಆದ್ದರಿಂದ ಈ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ದಂಡಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಆದೇಶ ಹೊರಡಿಸಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
2023ರ ಮಾರ್ಚ್ 31ರಂದು ಗುಜರಾತ್ ಹೈಕೋರ್ಟ್ನ ಏಕಸದಸ್ಯ ಪೀಠವು ಸಿಐಸಿ ಆದೇಶ ರದ್ದುಗೊಳಿಸಿತ್ತು ಮತ್ತು ಕೇಜ್ರಿವಾಲ್ ಅವರಿಗೆ ₹25,000 ದಂಡ ವಿಧಿಸಿತ್ತು. ಜೊತೆಗೆ ಆರ್ಟಿಐ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.
2016ರಲ್ಲಿ ಕೇಜ್ರಿವಾಲ್ ಅವರು ಸಿಐಸಿಗೆ ಪತ್ರ ಬರೆದು ಮೋದಿ ಅವರ ಪದವಿ ವ್ಯಾಸಂಗ ಕುರಿತಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕೆಂದು ಒತ್ತಾಯಿಸಿದ್ದರು. 2016ರ ಏಪ್ರಿಲ್ನಲ್ಲಿ ಅಂದಿನ ಸಿಐಸಿ ಎಂ. ಶ್ರೀಧರ್ ಆಚಾರ್ಯುಲು ಅವರು ಮೋದಿ ಪಡೆದ ಪದವಿಗಳ ಮಾಹಿತಿಯನ್ನು ಕೇಜ್ರಿವಾಲ್ಗೆ ಒದಗಿಸುವಂತೆ ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು.
ಮೂರು ತಿಂಗಳ ಬಳಿಕ ದೆಹಲಿ ವಿಶ್ವವಿದ್ಯಾಲಯವು ಹೈಕೋರ್ಟ್ ಮೆಟ್ಟಿಲೇರಿದಾಗ, ಕೋರ್ಟ್ ಸಿಐಸಿ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ಕೇಜ್ರಿವಾಲ್ ಅವರು ಸಿಐಸಿಗೆ ಪತ್ರ ಬರೆದ ಮರುದಿನವೇ ಸಿಐಸಿ ಆದೇಶ ಹೊರಬಿದ್ದಿತ್ತು. ಸರ್ಕಾರಿ ದಾಖಲೆಗಳನ್ನು ಸಾರ್ವಜನಿಕಗೊಳಿಸಲು ನಮಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದ ಕೇಜ್ರಿವಾಲ್, ಮೋದಿ ಅವರ ಶೈಕ್ಷಣಿಕ ಅರ್ಹತೆಯ ಮಾಹಿತಿಯನ್ನು ಆಯೋಗ ಏಕೆ ಮುಚ್ಚಿಡಲು ಬಯಸಿದೆ ಎಂದು ಪ್ರಶ್ನಿಸಿದ್ದರು.
2016ರ ಮೇಯಲ್ಲಿ ಅಂದಿನ ಗುಜರಾತ್ ವಿಶ್ವವಿದ್ಯಾಲಯದ ಕುಲಪತಿ ಎಂ.ಎನ್. ಪಟೇಲ್, ಪ್ರಧಾನಿ ಮೋದಿ ಅವರು 1983ರಲ್ಲಿ ಹೊರಗಿನ ವಿದ್ಯಾರ್ಥಿಯಾಗಿ ಶೇಕಡ 62.3ರಷ್ಟು ಅಂಕಗಳೊಂದಿಗೆ ರಾಜಕೀಯ ವಿಜ್ಞಾನದಲ್ಲಿ ಎಂಎ ಪದವಿ ಪೂರ್ಣಗೊಳಿಸಿದ್ದಾರೆ ಎಂದು ಘೋಷಿಸಿದ್ದರು.
ತನ್ನ ವೆಬ್ಸೈಟ್ನಲ್ಲಿ ಮೋದಿ ಅವರ ಪದವಿ ಕುರಿತಾದ ವಿವರವನ್ನು ಅಪ್ಲೋಡ್ ಮಾಡುವಾಗಲೇ, ಗುಜರಾತ್ ವಿಶ್ವವಿದ್ಯಾಲಯವು ಹೈಕೋರ್ಟ್ನಲ್ಲಿ ಸಿಐಸಿ ಆದೇಶವನ್ನು ಪ್ರಶ್ನಿಸಿತ್ತು. ಈ ವೇಳೆ ಏಕಸದಸ್ಯ ಪೀಠವು ಸಿಐಸಿ ನಿರ್ದೇಶನವನ್ನು ರದ್ದುಗೊಳಿಸಿತಲ್ಲದೆ, ಸಿಐಸಿಯನ್ನು ತರಾಟೆಗೆ ತೆಗೆದುಕೊಂಡು ಕೇಜ್ರಿವಾಲ್ ಅವರಿಗೆ ₹25,000 ದಂಡ ವಿಧಿಸಿತ್ತು.
ಏಕಸದಸ್ಯ ಪೀಠದ ಆದೇಶವನ್ನು ಕೇಜ್ರಿವಾಲ್, ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು.

