ಪಟ್ನಾ: ಬಿಹಾರದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳ ಮುರಿದ ಮೂಳೆ ಸರಿಪಡಿಸಬಹುದೇ ಹೊರತು, ಅವರ ಭಗ್ನಗೊಂಡ ಕನಸನ್ನು ಪುನಃ ಸ್ಥಾಪಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರು ಹಾರಿಸಿದ ಗುಂಡಿನಿಂದ ಗಾಯಗೊಂಡ ಬಿಹಾರದ ವಿದ್ಯಾರ್ಥಿಗಳು ಮತ್ತು ಯುವಕರ ಭೇಟಿಯ ವಿಡಿಯೊವನ್ನು ರಾಹುಲ್ ಎಕ್ಸ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಈ ಮಕ್ಕಳು ಮಾಡಿದ ಪಾಪವಾದರೂ ಏನು? ಶಿಕ್ಷಣ, ಉದ್ಯೋಗ ಮತ್ತು ಹೊಣೆಗಾರಿಕೆ ಬಯಸಿದ್ದ ಇವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ವಿಡಿಯೊ ಜೊತೆಗಿನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಸೇನೆಗೆ ಸೇರುವ ಕನಸು ಛಿದ್ರ
ಎ.ಕೆ. 47ನಿಂದ ಹಾರಿದ ಗುಂಡು ಬಿದ್ದು ಒಬ್ಬ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದೆ. ಇದರೊಂದಿಗೆ, ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆತನ ಕನಸು ಕಮರಿದೆ. ಪೊಲೀಸರು ಹಾರಿಸಿದ ಗುಂಡುಗಳು ಇಬ್ಬರು ವಿದ್ಯಾರ್ಥಿಗಳ ಭುಜವನ್ನು ಸೀಳಿವೆ ಎಂದಿದ್ದಾರೆ.
ವಿದ್ಯಾರ್ಥಿಗಳು ಕ್ರಿಮಿನಲ್‌ಗಳಲ್ಲ. ಅವರು ಬಡಕುಟುಂಬಗಳ ಮಕ್ಕಳು. ತಮ್ಮ ಕುಟುಂಬಗಳ ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕೆ ಬಂದಿದ್ದರು. ಕೆಲವರು ಒಂದೊಳ್ಳೆ ಉದ್ಯೋಗದ ಕನಸು ಕಂಡಿದ್ದರೆ, ಮತ್ತೆ ಕೆಲವರು, ತಮ್ಮ ಕುಟುಂಬದ ಸ್ಥಿತಿ ಬದಲಾಯಿಸಲು ಬಯಸಿದ್ದರು ಎಂದಿದ್ದಾರೆ.
ಗುಂಡಿನೇಟಿನಿಂದಾದ ಗಾಯ ವಾಸಿ ಮಾಡಬಹುದು. ಈಗ ಈ ಮಕ್ಕಳ ಮನಸ್ಸಿನಲ್ಲಿ ಗಾಢವಾಗಿ ಬೇರೂರಿರುವ ಭಯ ಹೋಗಲಾಡಿಸುವ ಆಸ್ಪತ್ರೆ ಎಲ್ಲಿದೆ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
'ಪ್ರಧಾನ ಮಂತ್ರಿಗಳೇ.. ಮುಖ್ಯಮಂತ್ರಿಗಳೇ.. ವಿದ್ಯಾರ್ಥಿಗಳ ಮುರಿದ ಮೂಳೆ ಸರಿಮಾಡಿಸಬಹುದು. ಆದರೆ, ಅವರ ಛಿದ್ರಗೊಂಡ ಕನಸನ್ನು ಮರಳಿಸಲು ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ.
ಈ ವಿದ್ಯಾರ್ಥಿಗಳು ನ್ಯಾಯಯುತ ಅವಕಾಶ, ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು ಎಂದಿದ್ದಾರೆ.
ಅಂತಹ ಬೇಡಿಕೆಗಳನಿಟ್ಟ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮತ್ತು ಗುಂಡು ಹಾರಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಶಿಕ್ಷಕರ ನೇಮಕದಲ್ಲಿ ಏಕ ಹಂತದ ಪರೀಕ್ಷೆ ಮತ್ತು ಪಾರದರ್ಶಕ ನೇಮಕ ಪ್ರಕ್ರಿಯೆಗೆ ಒತ್ತಾಯಿಸಿ, ಕಳೆದ ತಿಂಗಳು ಉದ್ಯೋಗಾಕಾಂಕ್ಷಿಗಳು ಮುಖ್ಯಮಂತ್ರಿ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು. ಈ ಸಂದರ್ಭ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿತ್ತು. ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದ್ದ ಪೊಲೀಸರು, ಗುಂಡು ಹಾರಿಸಿದ್ದರು.

