ಮುಂಬೈ (PTI): ಮುಂಬೈನ ಜಿಎಸ್‌ಬಿ ಸೇವಾ ಮಂಡಲವು ಮುಂಬರುವ ಗಣೇಶೋತ್ಸವದ ಆಚರಣೆಗಾಗಿ ₹703.27 ಕೋಟಿ ಮೊತ್ತದ ವಿಮೆ ಮಾಡಿಸಿದೆ. ಕಳೆದ ವರ್ಷ ₹474 ಕೋಟಿ ಮೊತ್ತದ ವಿಮೆ ಮಾಡಿಸಿತ್ತು.
'ಸೆಪ್ಟೆಂಬರ್ 14ರಿಂದ 18ರವರೆಗೆ 72ನೇ ಗಣೇಶೋತ್ಸವ ಆಯೋಜಿಸಲಾಗಿದ್ದು, 12ರಂದು ರಾತ್ರಿ 8 ಗಂಟೆಗೆ ನಡೆಯುವ 'ವಿರಾಟ ದರ್ಶನ' ಸಮಾರಂಭದಲ್ಲಿ ಗಣೇಶ ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತದೆ.
ಗಣೇಶ ವಿಗ್ರಹವನ್ನು 66 ಕೆ.ಜಿ. ಚಿನ್ನ ಮತ್ತು 335 ಕೆ.ಜಿ ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗುತ್ತದೆ' ಎಂದು ಮಂಡಲದ ವಕ್ತಾರ ಅಮಿತ್ ಪೈ ಪತ್ರಿಕಾ ಹೇಳಿಕೆಯಲ್ಲಿ ಭಾನುವಾರ ತಿಳಿಸಿದ್ದಾರೆ.
'ಭಕ್ತರ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಬೃಹತ್ ಮೊತ್ತದ ವಿಮೆ ಮಾಡಿಸಲಾಗಿದೆ. ಮಹಾಗಣಪತಿ ಮೂರ್ತಿಯು ಪರಿಸರ ಸ್ನೇಹಿಯಾಗಿದೆ. ಚಿನ್ನ ಮತ್ತು ಬೆಳ್ಳಿ ಆಭರಣಗಳು, ಅಮೂಲ್ಯ ರತ್ನಗಳನ್ನು ದಾನಿಗಳು ನೀಡಲಿದ್ದಾರೆ' ಎಂದು ತಿಳಿಸಿದ್ದಾರೆ.
'ಪ್ರತಿದಿನ 40 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನದಾನ ಸೇವೆ ನೀಡಲಾಗುತ್ತದೆ. ಎರಡು ಲಕ್ಷಕ್ಕೂ ಹೆಚ್ಚಿನ ಜನರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ' ಎಂದು ಹೇಳಿದ್ದಾರೆ.
ಮುಂಬೈನ ಅತ್ಯಂತ ಶ್ರೀಮಂತ ಗಣೇಶ ಮಂಡಲವೆಂದು ಪ್ರಸಿದ್ಧಿ ಪಡೆದಿರುವ ಜಿಎಸ್‌ಬಿ ಸೇವಾ ಮಂಡಲವು ಕಿಂಗ್ಸ್ ವೃತ್ತದಲ್ಲಿ ಈ ಉತ್ಸವವನ್ನು ಆಯೋಜಿಸುತ್ತದೆ. ಇದು ಹೆಚ್ಚಿನ ಭಕ್ತರನ್ನು ಆಕರ್ಷಿಸುತ್ತದೆ.
ಗಣೇಶ ಚತುರ್ಥಿ ಪ್ರಯುಕ್ತ ಮುಂಬೈನ ವಿವಿಧೆಡೆ ಪ್ರತಿಷ್ಠಾಪಿಸಲು ಗಣೇಶ ಮೂರ್ತಿಗಳನ್ನು ಭಾನುವಾರ ಕೊಂಡೊಯ್ಯಲಾಯಿತು -ಪಿಟಿಐ ಚಿತ್ರ

