ಪಟ್ನಾ (PTI): ಜೆಡಿಯು ಅನ್ನು 'ಜೆಡಿಯು-ನಿತೀಶ್' ಎಂದು ಮರುನಾಮಕರಣ ಮಾಡಲು ಪಕ್ಷದ ನಾಯಕರು ಮುಂದಾಗಿರುವುದಕ್ಕೆ ಸುರಾಜ್ ಪಕ್ಷದ ಸಂಸ್ಥಾಪಕ, ಶಾಸಕ ಪ್ರಶಾಂತ್ ಕಿಶೋರ್ ಅವರು ಲೇವಡಿ ಮಾಡಿದ್ದಾರೆ.
'ಜೆಡಿಯುಗೆ ಯಾವ ಹೊಸ ಹೆಸರು ನೀಡಲಾಗುತ್ತದೆ ಎಂಬುದು ಮುಖ್ಯವಲ್ಲ.
ವಾಸ್ತವ ಏನೆಂದರೆ, ಆ ಪಕ್ಷವನ್ನು ನಿತೀಶ್ ಕುಮಾರ್ ನಡೆಸುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಯಂತ್ರಿಸುತ್ತಿದ್ದಾರೆ. ಬಿಜೆಪಿಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಶಾ ಅವರು ನೇಮಿಸಿರುವ ಇಬ್ಬರು ವ್ಯಕ್ತಿಗಳು ಜೆಡಿಯುನಲ್ಲಿದ್ದಾರೆ' ಎಂದು ಜೆಡಿಯು ಪಕ್ಷದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ಶಾ ಅವರು ಯಾರನ್ನು ನೇಮಿಸಿದ್ದಾರೆ ಎಂಬುದರ ಕುರಿತು ಅವರು ಯಾವುದೇ ಸುಳಿವು ನೀಡಲಿಲ್ಲ. ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಮತ್ತು ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಅವರ ಕಡೆಗೆ ಜೆಡಿಯು ಅತೃಪ್ತ ನಾಯಕರು ಬೆರಳು ತೋರಿಸುತ್ತಿರುವುದರಿಂದ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆಗಳು ಹೆಚ್ಚಿನ ಮಹತ್ವ ಪಡೆದುಕೊಂಡಿವೆ.
ಪರಮೋಚ್ಚ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಗೌರವ ಸಲ್ಲಿಸಲು 'ಜೆಡಿಯು-ನಿತೀಶ್' ಎಂದು ಮರುನಾಮಕರಣ ಮಾಡುವ ಸಲಹೆಯನ್ನು ಪರಿಗಣಿಸುತ್ತಿರುವುದಾಗಿ ಜೆಡಿಯು ಶುಕ್ರವಾರ ತಿಳಿಸಿತ್ತು.

