ನವದೆಹಲಿ: ಹಲವು ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರು ಮೃತಪಟ್ಟ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಡು ಸಮುದ್ರದಲ್ಲಿ ನಡೆಯುವ ಸಂಘರ್ಷದಲ್ಲಿ ಅರಿವಿಲ್ಲದೆ ಸಿಲುಕಿಕೊಳ್ಳುವವರಿಗೆ ನೆರವಾಗಲು 'ನಾವಿಕರ ತುರ್ತುನೆರವು ಜಾಲ' ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.
ಜಾಗತಿಕ ವ್ಯಾಪಾರಕ್ಕೆ ನಾವಿಕರು ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಆದರೆ, ಕ್ಲಿಷ್ಟ ಸಂದರ್ಭಗಳಲ್ಲಿ ಅವರಿಗೆ ಸೂಕ್ತ ನೆರವು ಸಿಗುತ್ತಿಲ್ಲ. ಹಾಗಾಗಿ, 'ನಾವಿಕರ ತುರ್ತುನೆರವು ಜಾಲ' ಸ್ಥಾಪನೆಗೆ ನಾನು ಪ್ರಸ್ತಾಪಿಸುತ್ತಿದ್ದೇನೆ ಎಂದು ಬ್ರಿಕ್ಸ್ ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದಾರೆ.
'ಸಂಕಷ್ಟಕ್ಕೆ ಸಿಲುಕಿರುವ ನಾವಿಕರು, ನೌಕಾಧಿಕಾರಿಗಳು ಮತ್ತು ಸಂಬಂಧಪಟ್ಟ ದೇಶದ ರಾಜತಾಂತ್ರಿಕ ಮಿಷನ್ ಅನ್ನು ಸಂಪರ್ಕಿಸಲು ಈ ಜಾಲವು ಅನುವುಮಾಡಿಕೊಡಬೇಕು. ಸಂಕಷ್ಟದ ಸಂದೇಶ ರವಾನೆ, ವೈದ್ಯಕೀಯ ನೆರವು, ಕುಟುಂಬಕ್ಕೆ ಮಾಹಿತಿ ನೀಡುವುದು ಮತ್ತು ಸ್ಥಳಾಂತರದಂತಹ ವಿಷಯಗಳಲ್ಲಿ ನೆರವು ಒದಗಿಸಬೇಕು'ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಸಂಧಿ, ಕಪ್ಪು ಸಮುದ್ರದಲ್ಲಿ ಭಾರತೀಯ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ 15 ನಾವಿಕರು ಮೃತಪಟ್ಟಿದ್ದಾರೆ.
ಭಾರತೀಯ ನಾವಿಕರ ಹತ್ಯೆ ಕುರಿತಂತೆ ಅಮೆರಿಕ, ಇರಾನ್, ರಷ್ಯಾ ಮತ್ತು ಉಕ್ರೇನ್ ವಿರುದ್ಧ ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿಇತ್ತು.

