ನವದೆಹಲಿ(PTI): ಪ್ರಧಾನಿ ನರೇಂದ್ರ ಮೋದಿ ಅವರ ಬಲಗಡೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿಂತಿದ್ದರೆ, ಎಡಗಡೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಇದ್ದರು. ಅವರಿಬ್ಬರ ಕೈ ಹಿಡಿದು, ಮೋದಿ ಬೀಗುತ್ತಿದ್ದರು. ಈ ಮೂಲಕ, ಏಷ್ಯಾದ ಮೂರು ಪ್ರಮುಖ ರಾಷ್ಟ್ರಗಳ ನಾಯಕರು ಇಲ್ಲಿನ 'ಭಾರತ ಮಂಟಪ'ದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.
ರಾಜತಾಂತ್ರಿಕ ಶಿಷ್ಟಾಚಾರದ ನಡುವೆಯೂ, ಪುಟಿನ್ ಹಾಗೂ ಜಿನ್‌ಪಿಂಗ್ ಅವರ ಕೈ ಹಿಡಿದು ನಿಂತಿರುವ ಚಿತ್ರವನ್ನು ಪ್ರಧಾನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಜನಪ್ರಿಯ 'ಕಿಂಗ್‌ಡಮ್ ಬಿಜಿಎಂ' ಗೀತೆ ರಿಂಗಣಿಸುತ್ತದೆ.
ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಇತರ ದೇಶಗಳ ನಾಯಕರೊಂದಿಗಿನ ಚಿತ್ರಗಳನ್ನು ಸಹ ಮೋದಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಪುಟಿನ್, ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗೆ ಹೆಜ್ಜೆಹಾಕುತ್ತಿರುವ ಚಿತ್ರ ಹಂಚಿಕೊಂಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ಮೋದಿಯವರು ಪುಟಿನ್, ಜಿನ್‌ಪಿಂಗ್ ಹಾಗೂ ಇಂಡೊನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರೊಂದಿಗೆ ಚರ್ಚೆ ನಡೆಸುತ್ತಿರುವುದು ಇದೆ.

