ನವದೆಹಲಿ: ವಿದ್ಯುತ್ ವಿತರಣಾ ಕಂಪನಿಯು ಬಿಲ್ಲಿಂಗ್ ಅವಧಿಯಲ್ಲಿ ಗ್ರಾಹಕರಿಗೆ ಬಿಲ್ ನೀಡದಿದ್ದರೆ ಹಾಗೂ ಬಾಕಿ ಹಣವನ್ನು ಮುಂದಿನ ಬಿಲ್‌ಗಳಲ್ಲಿ 'ವಸೂಲಿ ಮಾಡಬೇಕಾದ ಬಾಕಿ ಹಣ' ಎಂದು ಸತತವಾಗಿ ನಮೂದಿಸದಿದ್ದರೆ, ಎರಡು ವರ್ಷಗಳಿಗಿಂತ ಹಳೆಯ ಬಾಕಿ ಹಣವನ್ನು ಪಾವತಿಸುವಂತೆ ಗ್ರಾಹಕರಿಗೆ ನೋಟಿಸ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 56(2)ರ ಪ್ರಕಾರ, ವಿದ್ಯುತ್ ವಿತರಣಾ ಕಂಪನಿಯು ಗ್ರಾಹಕರಿಗೆ ಇಂತಿಷ್ಟು ಹಣ ಕಟ್ಟಬೇಕು ಎಂದು ಅಧಿಕೃತವಾಗಿ ಬಿಲ್ ನೀಡುವವರೆಗೆ, ಆ ಹಣವನ್ನು ಬಾಕಿ ಮೊತ್ತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಂಪನಿಯು ಬಿಲ್ ನೀಡಿದ ದಿನದಿಂದಷ್ಟೇ ಆ ಹಣವನ್ನು ವಸೂಲಿ ಮಾಡುವ ಪ್ರಕ್ರಿಯೆ ಅಥವಾ ಸಮಯದ ಮಿತಿ ಆರಂಭವಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಎಸ್.ವಿ.ಎನ್. ಭಟ್ಟಿ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ತಿಳಿಸಿದೆ.
1998ರ ಅವಧಿಯ ಕನಿಷ್ಠ ವಿದ್ಯುತ್ ಬಳಕೆ ಶುಲ್ಕವನ್ನು ಕಟ್ಟುವಂತೆ 2007ರಲ್ಲಿ ಗ್ರಾಹಕರಿಗೆ ನೀಡಿದ್ದ ನೋಟಿಸ್ ಅನ್ನು ರದ್ದುಪಡಿಸಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ದಕ್ಷಿಣಾಂಚಲ ವಿದ್ಯುತ್ ವಿತರಣಾ ನಿಗಮವು ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠವು ವಜಾಗೊಳಿಸಿದೆ.
ಪೀಠವು ಸೆಪ್ಟೆಂಬರ್ 10ರಂದು ನೀಡಿರುವ ತೀರ್ಪಿನಲ್ಲಿ, 'ಈ ಬೇಡಿಕೆಯು ವಾಸ್ತವಾಂಶಗಳು ಮತ್ತು ಕಾಲಮಿತಿ ಎರಡರ ಆಧಾರದ ಮೇಲೂ ನಿಲ್ಲಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
1997ರಲ್ಲಿ ಗ್ರಾಹಕರೊಬ್ಬರು 4 ಸಾವಿರ ಕೆವಿಎ ಲೋಡ್ ವಿದ್ಯುತ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ಎರಡು ಸಾವಿರ ಕೆವಿಎ ಲೋಡ್ ಮಾತ್ರ ಮಂಜೂರು ಮಾಡಲಾಗಿತ್ತು. 1998ರ ಜನವರಿಯಲ್ಲಿ ವಿದ್ಯುತ್ ವಿತರಣಾ ಕಂಪನಿಯು ಹೆಚ್ಚುವರಿ ಎರಡು ಸಾವಿರ ಕೆವಿಎ ಲೋಡ್ ನೀಡಿತ್ತು. ಆದರೆ, ಅದನ್ನು ಗ್ರಾಹಕರು ನಿರಾಕರಿಸಿದ್ದರು.
ಒಂಬತ್ತು ವರ್ಷಗಳ ನಂತರ, 2007ರ ಫೆಬ್ರುವರಿ 13ರಂದು ಕಂಪನಿಯು ಒಪ್ಪಂದದ ಸಾಮರ್ಥ್ಯವನ್ನು 4 ಸಾವಿರ ಕೆವಿಎ ಎಂದು ಪರಿಗಣಿಸಿ, 1998ರ ಫೆಬ್ರುವರಿ-ಸೆಪ್ಟೆಂಬರ್ ಅವಧಿಯ ಕನಿಷ್ಠ ಬಳಕೆ ಗ್ಯಾರಂಟಿ ಶುಲ್ಕಕ್ಕಾಗಿ ₹57.74 ಲಕ್ಷ ಪಾವತಿಸುವಂತೆ ನೋಟಿಸ್ ನೀಡಿತ್ತು. ಇದನ್ನು ವಿದ್ಯುತ್ ಓಂಬುಡ್ಸ್‌ಮನ್ ವಜಾಗೊಳಿಸಿತ್ತು. ಅಲಹಾಬಾದ್ ಹೈಕೋರ್ಟ್ (ಲಖನೌ ಪೀಠ) 2012ರ ಜನವರಿಯಲ್ಲಿ ಇದನ್ನು ಎತ್ತಿಹಿಡಿದಿತ್ತು.

