ನವದೆಹಲಿ (PTI): ಕಚ್ಚಾ ತೈಲ ದರ ಏರಿಕೆ, ಹಣದುಬ್ಬರದ ಒತ್ತಡ, ಜಾಗತಿಕ ಮಟ್ಟದಲ್ಲಿ ಮುಂದುವರಿದ ಬಿಕ್ಕಟ್ಟಿನಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಕ್ಟೋಬರ್ ತಿಂಗಳಿನಲ್ಲಿ ಶೇ 0.25ರಷ್ಟು ರೆಪೊ ದರವನ್ನು ಹೆಚ್ಚಿಸಬಹುದು ಎಂದು ಎಸ್‌ಬಿಐನ ಸಂಶೋಧನಾ ವರದಿ ತಿಳಿಸಿದೆ.
ಡಿಸೆಂಬರ್ ತಿಂಗಳಿನಲ್ಲೂ ಇಷ್ಟೇ ಪ್ರಮಾಣದ ರೆಪೊ ದರ ಏರಿಕೆ ಮಾಡಬಹುದಾಗಿದ್ದು, ಒಟ್ಟಾರೆ ಶೇ 0.50ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಿದೆ.
ಅಕ್ಟೋಬರ್ 5ರಿಂದ 7ರವರೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆ ನಡೆಯಲಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಆರ್‌ಬಿಐ ರೆಪೊ ದರವನ್ನು ಸತತ ನಾಲ್ಕನೇ ಬಾರಿಯೂ ಯಥಾಸ್ಥಿತಿಯಲ್ಲಿ ಇರಿಸಿದೆ. ಪ್ರಸ್ತುತ ರೆಪೊ ದರ ಶೇ 5.25ರಷ್ಟಿದೆ.
ಕಳೆದ ತಿಂಗಳು ನಡೆದ ಎಂಪಿಸಿ ಸಭೆಯಲ್ಲಿ ರೆಪೊ ದರ ಹೆಚ್ಚಳದ ಬಗ್ಗೆ ಹೆಚ್ಚು ಚರ್ಚೆಯಾಗಿರಲಿಲ್ಲ. ಆದರೆ, ಇದೀಗ ಪರಿಸ್ಥಿತಿ ಬಹಳಷ್ಟು ಬದಲಾಗಿದೆ ಎಂದು ಹೇಳಿದೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ರಾಜಕೀಯ ಅನಿಶ್ಚಿತತೆಯಿಂದ ಬ್ರೆಂಟ್ ಕಚ್ಚಾ ತೈಲದ ದರ ಪ್ರತಿ ಬ್ಯಾರಲ್‌ಗೆ ಈಗಾಗಲೇ 100 ಡಾಲರ್ ದಾಟಿದೆ. ಮುಂದಿನ 15 ದಿನಗಳಲ್ಲಿ ಇದು 123 ಡಾಲರ್‌ಗೆ ಹೆಚ್ಚಳವಾಗಬಹುದು ಎಂದು ಅಂದಾಜಿಸಿದೆ.
'ಆಗಸ್ಟ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ದರವು ಶೇ 4.8ರಿಂದ ಶೇ 4.9ರವರೆಗೆ ಇರಬಹುದು. ಕಚ್ಚಾ ತೈಲ ದರದ ಏರಿಕೆ ಮುಂದುವರಿದರೆ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಹಣದುಬ್ಬರವು ಶೇ 6.5 ಅಥವಾ ಅದಕ್ಕಿಂತ ಹೆಚ್ಚಾಗಬಹುದು ಎಂದು ಹೇಳಿದೆ.
ಉತ್ಪಾದನಾ ದರಕ್ಕಿಂತ, ತಯಾರಿಕಾ ವೆಚ್ಚದ ಬೆಲೆಯು ಕೆಲವು ವಲಯಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಿದೆ. ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪಾನೀಯಗಳು, ಔಷಧಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಈರುಳ್ಳಿ, ಅಡುಗೆ ಎಣ್ಣೆ ಮತ್ತು ಎಲ್‌ಪಿಜಿ ದರದಲ್ಲಿ ಹೆಚ್ಚು ಏರಿಕೆಯಾದಂತೆ ಆಹಾರ ಹಣದುಬ್ಬರ ತೀವ್ರವಾಗಿ ಏರುತ್ತಿದೆ.
ವಿದೇಶಿ ಕರೆನ್ಸಿಯನ್ನು ಆಕರ್ಷಿಸಲು ಇತ್ತೀಚೆಗೆ ಆರ್‌ಬಿಐ ಅನುಮತಿ ನೀಡಿದೆ. ಇದರಿಂದ ಅನಿವಾಸಿ ಭಾರತೀಯರ ಬ್ಯಾಂಕ್ ಠೇವಣಿಗಳ (ಎಫ್‌ಸಿಎನ್ ಆರ್-ಬಿ) ಮೂಲಕ ₹12.13 ಲಕ್ಷ ಕೋಟಿ (127 ಬಿಲಿಯನ್ ಡಾಲರ್) ಬ್ಯಾಂಕಿಂಗ್ ವ್ಯವಸ್ಥೆಗೆ ಹರಿದು ಬಂದಿದೆ ಎಂದು ತಿಳಿಸಿದೆ.

