ನವದೆಹಲಿ: ಭಾರತದ ನೆಲದಲ್ಲಿ ಚೀನಾ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಯಾವುದೇ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಷಿ ಜಿನ್‌ಪಿಂಗ್‌ಗೆ ಭರವಸೆ ನೀಡಿರುವುದಾಗಿ ಚೀನಾ ಹೇಳಿಕೊಂಡಿದೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಆಗಮಿಸಿದ್ದ ಷಿ ಅವರೊಂದಿಗೆ ಮೋದಿ ಶನಿವಾರ (ಸೆ.12) ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಸಭೆಗೆ ಸಂಬಂಧಿಸಿದಂತೆ ಚೀನಾದ ವಿದೇಶಾಂಗ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ.
ಉಭಯ ನಾಯಕರ ಭೇಟಿ ಸಂಬಂಧ ಭಾರತೀಯ ವಿದೇಶಾಂಗ ಸಚಿವಾಲಯವೂ ಪ್ರಕಟಣೆ ಹೊರಡಿಸಿದ್ದು, ʼಎರಡೂ ರಾಷ್ಟ್ರಗಳು ಪರಸ್ಪರ ಗೌರವ, ಪರಸ್ಪರ ಸಂವೇದನೆ ಮತ್ತು ಪರಸ್ಪರ ಹಿತಾಸಕ್ತಿಯನ್ನೊಳಗೊಂಡ ಮೂರು ಅಂಶಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ಮೋದಿ ಅವರು ಷಿಗೆ ತಿಳಿಸಿದ್ದಾರೆʼ ಎಂಬುದಾಗಿ ಮಾಹಿತಿ ಹಂಚಿಕೊಂಡಿತ್ತು. ಅದರಲ್ಲಿ ಟಿಬೆಟ್ ಮತ್ತು ತೈವಾನ್ ವಿಚಾರಗಳಲ್ಲಿ ಭಾರತದ ನಿಲುವು ಏನು ಎಂಬುದನ್ನು ಉಲ್ಲೇಖಿಸಿರಲಿಲ್ಲ.
ಆದರೆ, ಚೀನಾದ ಹೇಳಿಕೆಯಲ್ಲಿ ಬೇರೆಯದ್ದೇ ವಿಚಾರಗಳಿವೆ. ʼಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತದೆ. ಚೀನಾ ಜೊತೆಗಿನ ಸಂಬಂಧವು ಯಾವುದೇ ಮೂರನೇ ರಾಷ್ಟ್ರದ ಪ್ರಭಾವಕ್ಕೆ ಒಳಪಟ್ಟಿರುವುದಿಲ್ಲ. ತೈವಾನ್ ಮತ್ತು ಟಿಬೆಟ್ ವಿಚಾರದಲ್ಲಿ ಭಾರತದ ನೀತಿ ಸ್ಥಿರವಾಗಿದೆ. ಭಾರತದಲ್ಲಿ ಚೀನಾ ವಿರೋಧಿ ಚಟುವಟಿಕೆಗಳನ್ನು ನಡೆಸಲು ಯಾವುದೇ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮೋದಿ ಹೇಳಿದ್ದಾರೆʼ ಎಂಬುದಾಗಿ ಉಲ್ಲೇಖಿಸಲಾಗಿದೆ.
ತೈವಾನ್ ಜೊತೆ ಯಾವುದೇ ರಾಷ್ಟ್ರ ಸಂಬಂಧ ಹೊಂದುವುದನ್ನು ಚೀನಾ ವಿರೋಧಿಸುತ್ತದೆ. ಆದಾಗ್ಯೂ, ಭಾರತ ಇತ್ತೀಚೆಗೆ ತೈವಾನ್ ಜೊತೆ ಸಾರ್ವಜನಿಕ ಹಣಕಾಸು ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿತ್ತು.

