ನವದೆಹಲಿ: ಚರ್ಚ್ ನೀಡುವ 'ಜ್ಞಾನಸ್ನಾನ' ಪ್ರಮಾಣ ಪತ್ರವು (ಧಾರ್ಮಿಕ ಪ್ರಮಾಣ ಪತ್ರ) ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ತೆಯ ವಯಸ್ಸು ಸಾಬೀತುಪಡಿಸಲು ಮಾನ್ಯ ಪುರಾವೆಯಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಪೋಕ್ಸೊ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಎತ್ತಿಹಿಡಿದ ಮೇಘಾಲಯ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಪಿ. ಬರೇಹ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎನ್.ವಿ ಅಂಜಾರಿಯಾ ಅವರ ಪೀಠವು ವಿಚಾರಣೆ ನಡೆಸಿತು.
'ಮಕ್ಕಳ ವಯಸ್ಸು ನಿರ್ಧರಿಸಲು ಶಾಲೆಯಿಂದ ಪಡೆದ ಜನನ ಪ್ರಮಾಣ ಪತ್ರ ಅಥವಾ 10ನೇ ತರಗತಿ ಅಂಕಪಟ್ಟಿಗೆ ಆದ್ಯತೆ ನೀಡಬೇಕು. ಬಾಲ ನ್ಯಾಯ ಕಾಯ್ದೆಯಡಿ ನಿಗದಿಪಡಿಸಲಾದ ದಾಖಲೆಗಳ ಶ್ರೇಣಿಯನ್ನು ನ್ಯಾಯಾಲಯಗಳು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
'ನಿಗಮ, ಪುರಸಭೆ, ಪ್ರಾಧಿಕಾರ ಅಥವಾ ಪಂಚಾಯಿತಿಯಿಂದ ನೀಡಿದ ಜನನ ಪ್ರಮಾಣಪತ್ರವನ್ನೂ ವಯಸ್ಸು ನಿರ್ಧರಿಸುವ ದಾಖಲೆಯಾಗಿ ಪರಿಗಣಿಸಬಹುದು. ಈ ದಾಖಲೆಗಳು ಲಭ್ಯವಿಲ್ಲದಿದ್ದಾಗ ಮಾತ್ರ ನ್ಯಾಯಾಲಯವು ಮಗುವಿನ ಮೂಳೆಗಳ ಬೆಳವಣಿಗೆಯ ಆಧಾರದ ಮೇಲೆ ವಯಸ್ಸು ನಿರ್ಧರಿಸುವ ಪರೀಕ್ಷೆ ಅಥವಾ ಇನ್ನಿತರ ವೈದ್ಯಕೀಯ ವಿಧಾನಗಳನ್ನು ಅನುಸರಿಸಬಹುದು' ಎಂದು ಹೇಳಿದೆ.
'ವಯಸ್ಸು ನಿರ್ಧರಿಸುವ ಸಮರ್ಪಕ ದಾಖಲೆ ಇದ್ದಾಗ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಮೇಘಾಲಯದ ಸುಟಂಗಾ ಗ್ರಾಮದ ಮೊಕೊಡಾಲಿಂಗ್ನಲ್ಲಿ ತನ್ನ 13 ವರ್ಷದ ಮಗಳ ಮೇಲೆ ಬರೇಹ್ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು 2019ರಲ್ಲಿ ಪ್ರಕರಣ ದಾಖಲಿಸಿದ್ದರು. ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯ ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಮೇಘಾಲಯ ಹೈಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಬರೇಹ್ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ಸಂತ್ರಸ್ತ ಮಗುವಿನ ವಯಸ್ಸು ನಿರ್ಧರಿಸಲು ಪ್ರಾಸಿಕ್ಯೂಷನ್ 'ಜ್ಞಾನಸ್ನಾನ' ಪ್ರಮಾಣಪತ್ರವನ್ನೇ ಅವಲಂಬಿಸಿದ್ದು, ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಸೂಚಿಸಲಾದ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದೆ ಎಂದು ನ್ಯಾಯಪೀಠ ಗಮನಿಸಿತು. ಆದರೆ, ವಯಸ್ಸು ಮಾತ್ರವಲ್ಲ, ವೈದ್ಯಕೀಯ ಪುರಾವೆ, ವಿಧಿವಿಜ್ಞಾನ, ಸಂತ್ರಸ್ತೆಯ ಸಾಕ್ಷ್ಯ ಮತ್ತಿತರರ ಅಂಶಗಳನ್ನು ಆಧರಿಸಿ ಅಪರಾಧಿಗೆ ಶಿಕ್ಷೆಯನ್ನು ನಿರ್ಧರಿಸಬಹುದು ಎಂದು ಅಭಿಪ್ರಾಯಪಟ್ಟ ಪೀಠವು, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 386ರ ಅಡಿಯಲ್ಲಿನ ಅಧಿಕಾರವನ್ನು ಬಳಸಿಕೊಂಡು, ಪೋಕ್ಸೊ ಅಪರಾಧವನ್ನು ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರದ ಶಿಕ್ಷೆಗೆ ಬದಲಾಯಿಸಿತು. ಅಪರಾಧಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ₹10 ಸಾವಿರ ದಂಡ ವಿಧಿಸಿತು.

