HEALTH TIPS

ಕಕ್ಷೆ ಸೇರಿದ ಭೂವೀಕ್ಷಣೆ ಉಪಗ್ರಹ: 'ಇಸ್ರೊ'ದಿಂದ ವರ್ಷದ ಮೊದಲ ಯಶಸ್ವಿ ಉಡ್ಡಯನ

ಶ್ರೀಹರಿಕೋಟಾ/ಚೆನ್ನೈ: ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಭೂವೀಕ್ಷಣೆ ಉಪಗ್ರಹವನ್ನು (ಇಒಎಸ್‌-05) ಶ್ರೀಹರಿಕೋಟಾದಿಂದ ಶುಕ್ರವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ. 


2,300 ಕೆ.ಜಿ ತೂಕದ ಈ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್‌17 ರಾಕೆಟ್‌, ಭೂಸ್ಥಿರ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು ಎಂದು ಹೇಳಿದೆ.

ಇದು, ಪ್ರಸಕ್ತ ವರ್ಷದ ಮೊದಲ ಯಶಸ್ವಿ ಉಡ್ಡಯನ. ಕಳೆದ ಜನವರಿಯಲ್ಲಿ ಪಿಎಸ್‌ಎಲ್‌ವಿ-ಸಿ62 ರಾಕೆಟ್‌ ಬಳಸಿ ಕೈಗೊಂಡಿದ್ದ ಉಪಗ್ರಹ ಉಡ್ಡಯನ ವಿಫಲವಾಗಿತ್ತು.

ಭೂವೀಕ್ಷಣೆ ಉಪಗ್ರಹವನ್ನು 'ಆಕಾಶದಲ್ಲಿನ ಕಣ್ಣು' ಎಂಬುದಾಗಿ ಹಿರಿಯ ವಿಜ್ಞಾನಿಗಳು ಬಣ್ಣಿಸಿದ್ದಾರೆ. ಭೂಮಿಯ ಚಿತ್ರಗಳನ್ನು ನೈಜ ಸಮಯದಲ್ಲಿ ಸೆರೆಹಿಡಿಯುವ ದೇಶದ ಮೊದಲ ಉಪಗ್ರಹ ಇದಾಗಿದ್ದು, ಇದರ ಉಡ್ಡಯನ ಮಾಡುವ ಮೂಲಕ ಇಸ್ರೊ ಇತಿಹಾಸ ಸೃಷ್ಟಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

'ಕೃಷಿ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ದತ್ತಾಂಶ ಸಂಗ್ರಹಕ್ಕೆ ಈ ಉಪಗ್ರಹ ನೆರವಾಗಲಿದೆ' ಎಂದಿರುವ ಇಸ್ರೊ, ಬೇಹುಗಾರಿಕೆ ಉದ್ದೇಶದಿಂದ ಈ ಉಪಗ್ರಹವನ್ನು ಉಡ್ಡಯನ ಮಾಡಲಾಗಿದೆ ಎಂಬ ಮಾತುಗಳನ್ನು ಅಲ್ಲಗಳೆದಿದೆ.

ಉಡ್ಡಯನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೊ ಮುಖ್ಯಸ್ಥ ವಿ.ನಾರಾಯಣನ್, 'ಶ್ರೀಹರಿಕೋಟಾದಿಂದ ಕೈಗೊಂಡಿರುವ 107ನೇ ಉಡ್ಡಯನ ಹಾಗೂ ಜಿಎಸ್‌ಎಲ್‌ವಿ ರಾಕೆಟ್‌ ಬಳಸಿ ಕೈಗೊಂಡಿರುವ 19ನೇ ಬಾಹ್ಯಾಕಾಶ ಕಾರ್ಯಕ್ರಮ ಇದಾಗಿದೆ' ಎಂದು ಹೇಳಿದರು.

ಕಾರ್ಯಕ್ರಮದ ನಿರ್ದೇಶಕ ಥಾಮಸ್ ಕುರಿಯನ್‌, ಯೋಜನಾ ನಿರ್ದೇಶಕ (ಉಪಗ್ರಹ) ಇಮ್ತಿಯಾಜ್ ಅಹಮದ್ ಉಪಸ್ಥಿತರಿದ್ದರು.

ಬತ್ತದ ಉತ್ಸಾಹ: ಉಪಗ್ರಹ ಉಡ್ಡಯನದ ಸಮಯ ಸಮೀಪಿಸುತ್ತಿದ್ದಂತೆಯೇ ಮಳೆ ಸುರಿಯಲು ಆರಂಭಿಸಿತು. ಆದರೆ, ಅದು ಅಲ್ಲಿ ನೆರೆದಿದ್ದವರ ಉತ್ಸಾಹವನ್ನು ತಗ್ಗಿಸಲಿಲ್ಲ. ಕೊಡೆಗಳನ್ನು ಹಿಡಿದುಕೊಂಡೇ ಜನರು ಉಡ್ಡಯನವನ್ನು ವೀಕ್ಷಿಸಿ, ಸಂಭ್ರಮಿಸಿದರು.

'ಇಒಎಸ್‌-05' ಉಪಗ್ರಹ ಉಡ್ಡಯನ ಬಳಿಕ ಇಸ್ರೊ ಅಧ್ಯಕ್ಷ ವಿ.ನಾರಾಯಣನ್ (ಮಧ್ಯದಲ್ಲಿರುವವರು) ತಮ್ಮ ಸಹೋದ್ಯೋಗಿಗಳ ಜೊತೆ ಸುದ್ದಿಗೋಷ್ಠಿ ನಡೆಸಿ ಜಿಎಸ್‌ಎಲ್‌ವಿ-ಎಫ್‌17 ರಾಕೆಟ್‌ ಮತ್ತು ಇಒಎಸ್‌-05 ಮಾದರಿಗಳನ್ನು ಪ್ರದರ್ಶಿಸಿದರು ಪಿಟಿಐ ಚಿತ್ರ ವಿ.ನಾರಾಯಣನ್ ಇಸ್ರೊ ಮುಖ್ಯಸ್ಥ ಕಕ್ಷೆಗೆ ಸೇರಿದ ಬಳಿಕ ಉಪಗ್ರಹದಲ್ಲಿನ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯಾಚರಣೆ ಮಾಡುತ್ತಿರುವುದನ್ನು ದತ್ತಾಂಶಗಳು ಖಚಿತಪಡಿಸಿವೆ. ಸೌರಫಲಕಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ'ಇಒಎಸ್‌-05' ಉಡ್ಡಯನವನ್ನು ಯಶಸ್ವಿಯಾಗಿ ಮಾಡಿರುವ ಇಸ್ರೊ ಸಾಧನೆ ಶ್ಲಾಘನೀಯ. ನಮ್ಮ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಎಂಜಿನಿಯರ್‌ಗಳ ಸಾಧನೆ ಬಗ್ಗೆ ಹೆಮ್ಮೆ ಇದೆ.ಜೈರಾಮ್‌ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಇದೊಂದು ಮಹತ್ವದ ಮೈಲಿಗಲ್ಲು. ಇಡೀ ದೇಶ ಇಸ್ರೊ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇಸ್ರೊದ ಅಂತಃಸತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಅದರ ಪುನರ್‌ರಚನೆ ಮಾಡುತ್ತಿರುವ ಸಂದರ್ಭದಲ್ಲಿ ಈ ಸಾಧನೆ ಇಸ್ರೊಗೆ ನೈತಿಕವಾಗಿ ಉತ್ತೇಜನ ನೀಡುತ್ತದೆ.

ಪ್ರಮುಖ ಅಂಶಗಳು...

* ನಭಕ್ಕೆ ಚಿಮ್ಮಿದ 18 ನಿಮಿಷಗಳ ಬಳಿಕ ಉಪಗ್ರಹವನ್ನು ರಾಕೆಟ್‌ ಕಕ್ಷೆಗೆ ಸೇರಿಸಿದೆ

* ಶುಕ್ರವಾರ ನಸುಕಿನ 2.55ಕ್ಕೆ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ

* ಬಹುತೇಕ ದೂರಸಂವೇದಿ ಉಪಗ್ರಹಗಳು ಭೂಮಿಯಿಂದ ನೂರಾರು ಕಿ.ಮೀ.ಗಳಷ್ಟು ಎತ್ತರದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ. 'ಇಒಎಸ್‌-05' ಭೂಮಿಯಿಂದ 36 ಸಾವಿರ ಕಿ.ಮೀ. ಎತ್ತರದಲ್ಲಿನ ಕಕ್ಷೆಯಲ್ಲಿ ಕಾರ್ಯಾಚರಣೆ ಮಾಡುತ್ತದೆ

* ಈವರೆಗೆ ಉಡ್ಡಯನ ಮಾಡಲಾದ ಅತ್ಯಂತ ಭಾರವಾದ ಉಪಗ್ರಹವಿದು (2300 ಕೆ.ಜಿ)

* ಜಿಎಸ್‌ಎಲ್‌ವಿ ರಾಕೆಟ್‌ ಸಾಮರ್ಥ್ಯ ಮೆಚ್ಚಿ ಅದನ್ನು ಇಸ್ರೊ 'ನಾಟಿ ಬಾಯ್' ಎಂದು ಕರೆಯುತ್ತದೆ. ಇದನ್ನು ಬಳಸಿ ಈವರೆಗೆ ಕೈಗೊಂಡಿರುವ 19 ಉಡ್ಡಯನಗಳ ಪೈಕಿ ನಾಲ್ಕು ಕಾರ್ಯಕ್ರಮಗಳು ಮಾತ್ರ ವಿಫಲವಾಗಿವೆ.

'ವರ್ಷಾಂತ್ಯಕ್ಕೆ ಮಾನವರಹಿತ ಗಗನಯಾನ'

'ಇದೇ ವರ್ಷದ ಅಂತ್ಯದ ವೇಳೆಗೆ ಮಾನವರಹಿತ ಗಗನಯಾನ ಕಾರ್ಯಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾದ ಸಿದ್ಧತೆಗಳು ವ್ಯವಸ್ಥಿತವಾಗಿ ಹಾಗೂ ಭರದಿಂದ ನಡೆಯುತ್ತಿವೆ' ಎಂದು ಇಸ್ರೊ ಮುಖ್ಯಸ್ಥವಿ. ನಾರಾಯಣನ್‌ ಹೇಳಿದರು.

'ಇಸ್ರೊ ವಿಜ್ಞಾನಿಗಳ ತಂಡವು ಈ ದಿಸೆಯಲ್ಲಿ ಬಾಹ್ಯಾಕಾಶ ಕ್ಷೇತ್ರದ ಉದ್ದಿಮೆಗಳು ಮತ್ತು ಸಂಘಟನೆಗಳೊಂದಿಗೆ ಶ್ರಮಿಸುತ್ತಿದೆ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 'ಮುಂದಿನ ವರ್ಷ ಮಾನವಸಹಿತ ಗಗನಯಾನ ಕೈಗೊಳ್ಳಲಾಗುವುದು.

ಇದಕ್ಕೆ ಪೂರ್ವಭಾವಿಯಾಗಿ ವಾಯುವಿನ ಗುಣಮಟ್ಟ ತಾಪಮಾನ ನಿಯಂತ್ರಣ ತ್ಯಾಜ್ಯ ನಿರ್ವಹಣೆ ತುರ್ತು ಸ್ಪಂದನೆಯಂತಹ ವಿವಿಧ ರೀತಿಯ 8 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ಇಸ್ರೊ ಯಶಸ್ವಿಯಾಗಿ ನಡೆಸಿದೆ' ಎಂದರು.

ದೇಶಕ್ಕೆ ಹೆಮ್ಮೆಯ ಕ್ಷಣ: ಮೋದಿ

ನವದೆಹಲಿ: 'ಭೂ ವೀಕ್ಷಣೆ ಉದ್ದೇಶದ ಹಾಗೂ ನೈಜ ಸಮಯದಲ್ಲಿ ಚಿತ್ರಗಳನ್ನು ಸೆರೆಹಿಡಿದು ರವಾನಿಸಬಲ್ಲ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದ್ದು ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

'ಇಸ್ರೊ ಮತ್ತೊಂದು ಅಸಾಧಾರಣ ಸಾಧನೆ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿರುವುದನ್ನು ಹಾಗೂ ನಾವೀನ್ಯಕ್ಕೆ ತೆರೆದುಕೊಳ್ಳುತ್ತಿರುವುದನ್ನು ಈ ಸಾಧನೆ ಸಾರುತ್ತದೆ' ಎಂದು ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. 'ಇಸ್ರೊ ಮತ್ತು ಉದ್ದಿಮೆಗಳ ನಡುವಿನ ಪಾಲುದಾರಿಕೆ ಹೆಚ್ಚುತ್ತಿದ್ದು ಇದರಿಂದ ದೇಶದ ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯವೂ ವಿಸ್ತರಿಸುತ್ತಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries