ನವದೆಹಲಿ: ವಿದೇಶದಲ್ಲಿರುವ ಭಾರತೀಯರಿಗೂ ಆಧಾರ್ ಕಾರ್ಡ್ ನೀಡಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಚಿಂತನೆ ನಡೆಸಿದೆ.
'ಎನ್‌ಆರ್‌ಐಗಳು ಮತ್ತು ಸಾಗರೋತ್ತರ ಭಾರತೀಯರಿಗೆ ಆಧಾರ್ ನೀಡುವ ಸಾಧಕ-ಬಾಧಕಗಳನ್ನು ವಿಚಾರ ಮಾಡುತ್ತಿದ್ದೇವೆ' ಎಂದು ಪ್ರಾಧಿಕಾರದ ಸಿಇಒ ಸೌರಭ್ ವಿಜಯ್ ತಿಳಿಸಿದರು.
'ಗ್ಲೋಬಲ್ ಫಿನ್‌ಟೆಕ್ ಫೆಸ್ಟ್-2026'ರ ವೇಳೆ ಗುರುವಾರ ಅನೌಪಚಾರಿಕವಾಗಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
'ಆಧಾರ್ ಕಾರ್ಡ್ ಅನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಕುರಿತು ನಮ್ಮ ಗಮನ ಇದೆ. ಇದನ್ನು ಹೇಗೆ ಕಾರ್ಯಸಾಧು ಮಾಡುವುದು ಎನ್ನುವ ಬಗ್ಗೆ ಪ್ರಾಯೋಗಿಕವಾಗಿ ಕೆಲಸಗಳು ನಡೆಯುತ್ತಿವೆ. ಇದಕ್ಕಾಗಿ ಕಾನೂನು ಹೇಗಿರಬೇಕು ಎನ್ನುವುದನ್ನೂ ಪರಿಶೀಲಿಸಲಾಗುತ್ತಿದೆ' ಎಂದರು.
'ಈ ಯೋಜನೆಯು ಕಾರ್ಯಸಾಧುವಾದರೆ, ಭಾರತಕ್ಕೆ ಹೂಡಿಕೆ ಹರಿವಿನ ಪ್ರಮಾಣವೂ ಹೆಚ್ಚಾಗಬಹುದು' ಎಂದರು.

