ರಾಯಪುರ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ 24 ವರ್ಷದ ಅಪರಾಧಿಗೆ ಛತ್ತೀಸಗಢದ ದುರ್ಗ್‌ನ ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷ ವಿಧಿಸಿದ್ದು, ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಹೇಳಿದೆ.
ಸೋಮೇಶ್ ಯಾದವ್ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ಪೋಕ್ಸೊ ಕಾಯ್ದೆಯ ಸೆಕ್ಷನ್ 6(1) ಮತ್ತು ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ಸೆಕ್ಷನ್ 103(1)ರ ಅಡಿಯಲ್ಲಿ ಗಂಭೀರ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಮಾಡಿರುವ ಅಪರಾಧದಲ್ಲಿ ಆತ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪಿತ್ತಿದೆ.
ಎರಡೂ ಸೆಕ್ಷನ್ ಅಡಿ ತಲಾ ₹5,000 ದಂಡ ವಿಧಿಸಲಾಗಿದೆ.
ಮರಣದಂಡನೆ ಶಿಕ್ಷೆ ವಿಧಿಸುವ ಕುರಿತಂತೆ ಹಲವು ಬಾರಿ ಚರ್ಚೆಗಳು ನಡೆದಿವೆ. 1973, 1979 ಮತ್ತು 1980ರಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. ಮರಣದಂಡನೆಗೆ ಕಾನೂನಿನಲ್ಲಿ ಅವಕಾಶವಿದ್ದು, ಅದನ್ನು ವಿಧಿಸುವ ಪ್ರಕ್ರಿಯೆಯು ನ್ಯಾಯಯುತ ಹಾಗೂ ಸಮಂಜಸವಾಗಿರಬೇಕು. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಬೇಕು ಎಂದು ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿರುವ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮರಣದಂಡನೆ ವಿಧಿಸುದ ನ್ಯಾಯಾಲಯಗಳು ಅದಕ್ಕೆ ವಿಶೇಷ ಕಾರಣಗಳನ್ನು ನೀಡುವುದು ಕಡ್ಡಾಯವಾಗಿದೆ.
ಇದೇ ವೇಳೆ, ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ಬಾಲಕಿ ಕುಟುಂಬಕ್ಕೆ ₹7 ಲಕ್ಷ ಪರಿಹಾರ ನೀಡುವಂತೆಯೂ ಆದೇಶಿಸಲಾಗಿದೆ.
2025ರ ಏಪ್ರಿಲ್‌ನಲ್ಲಿ ಕಾಣೆಯಾಗಿದ್ದ ಬಾಲಕಿಯ ದೇಹ ವಾಹನವೊಂದರಲ್ಲಿ ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಸಾಂದರ್ಭಿಕ ಸಾಕ್ಷಿಗಳ ಜೊತೆಗೆ, ಭೌತಿಕ ಮತ್ತು ಜೈವಿಕ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಯಾದವ್ ತಪ್ಪಿತಸ್ಥನೆಂದು ನ್ಯಾಯಾಲಯ ಆದೇಶಿಸಿದೆ. ವಿಶೇಷ ತನಿಖಾ ತಂಡ, ಪ್ರಕರಣದ ತನಿಖೆ ನಡೆಸಿತ್ತು.

