ಮುಂಬೈ: ಹತ್ತು ದಿನಗಳ ಗಣೇಶೋತ್ಸವದ ವೇಳೆ ಪುಣೆ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ಬಾಂಬೆ ಹೈಕೋರ್ಟ್ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮುಂಬೈ ಸೇರಿದಂತೆ ರಾಜ್ಯದ ಇತರ ಪ್ರದೇಶಗಳಲ್ಲಿ ಇಂತಹ ನಿರ್ಬಂಧ ಇಲ್ಲದಿರುವಾಗ ಪುಣೆಯಲ್ಲಿ ಮಾತ್ರ ಏಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಎಂ.ಸಿ. ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರನ್ನೊಳಗೊಂಡ ಪೀಠವು, ನಿಷೇಧ ಆದೇಶವನ್ನು ಹಿಂಪಡೆಯುವಂತೆ ಆಡಳಿತಕ್ಕೆ ಸೂಚಿಸಿದೆ. ಇಲ್ಲವಾದರೆ ಸೂಕ್ತ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಸಿತು.
ಒಂದು ಜಿಲ್ಲೆಗೆ ಸೀಮಿತವಾಗುವಂತ ಇಂತಹ ನಿರ್ಧಾರ ಮಾಡುವ ಮೂಲಕ ಪುಣೆ ನಿವಾಸಿಗಳಿಗೆ ಕಳಂಕ ತರುತ್ತಿದ್ದೀರಿ ಎಂದು ನ್ಯಾಯಾಲಯ ಹೇಳಿದೆ.
ಸೆ. 14ರಿಂದ ಗಣೇಶೋತ್ಸವ ಆರಂಭವಾಗಲಿದ್ದು, 10 ದಿನಗಳು ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹೋಟೆಲ್ ಮಾಲೀಕರು ಹಾಗೂ ಮದ್ಯದಂಗಡಿ ಮಾಲೀಕರ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
'ಪುಣೆಯಲ್ಲಿ ಮಾತ್ರ ನಿಷೇಧ ಹೇರಲು ಕಾರಣವೇನು? ಇಂತಹ ಕ್ರಮವನ್ನು ನಾವು ಖಂಡಿಸುತ್ತೇವೆ. ಇದು ಪುಣೆ ನಿವಾಸಿಗಳಿಗೆ ಕಳಂಕ ತರುವಂತದ್ದು. ಮದ್ಯ ಸೇವಿಸಿದ ಬಳಿಕ ಪುಣೆಯಲ್ಲಿರುವ ಜನರು ಮಾತ್ರ ಕೆಟ್ಟದಾಗಿ ವರ್ತಿಸುತ್ತಾರೆ ಎಂಬುದನ್ನು ಬಿಂಬಿಸಲು ನೀವು ಪ್ರಯತ್ನಿಸುತ್ತಿದ್ದೀರಾ? ಇಡೀ ರಾಜ್ಯದಲ್ಲಿ ಒಂದೇ ಜಿಲ್ಲೆಯನ್ನು ಏಕೆ ಆಯ್ಕೆ ಮಾಡುತ್ತಿದ್ದೀರಿ?' ಎಂದು ಪೀಠ ಪ್ರಶ್ನಿಸಿತು.
ನಿಷೇಧ ಆದೇಶವನ್ನು ಹಿಂಪಡೆಯಲಾಗುತ್ತದೆಯೇ ಎಂಬುದನ್ನು ದಿನದ ಅಂತ್ಯದೊಳಗೆ ತಿಳಿಸುವಂತೆ ಪುಣೆ ಜಿಲ್ಲಾಧಿಕಾರಿ ಪರ ವಾದ ಮಂಡಿಸಿದ ವಕೀಲರಿಗೆ ನ್ಯಾಯಾಲಯ ಸೂಚಿಸಿತು. ಆದೇಶ ಹಿಂಪಡೆಯದಿದ್ದರೆ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿತು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದ ನ್ಯಾಯಾಲಯ, ಪರವಾನಗಿ ಹೊಂದಿರುವ ಮದ್ಯ ಮಾರಾಟಗಾರರು 10 ದಿನಗಳು ವ್ಯವಹಾರ ನಡೆಸದಂತೆ ಸಂಪೂರ್ಣ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳಿತು.
ಅಧಿಕಾರಿಗಳು ತಮ್ಮ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಸೂಚಿಸಿದ ಪೀಠ, ಮದ್ಯ ಸೇವಿಸುವ ಪ್ರತಿಯೊಬ್ಬರೂ ರಸ್ತೆಯಲ್ಲಿ ಗಲಾಟೆ ಮಾಡುತ್ತಾರೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ಉಂಟುಮಾಡುತ್ತಾರೆ ಎಂದು ಹೇಳಲಾಗದು ಎಂದಿತು.

