ಜಕಾರ್ತ (AP): ಜ್ವಾಲಾಮುಖಿ ಸ್ಫೋಟದಿಂದಾಗಿ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ವಿಮಾನಗಳ ಹಾರಾಟವು ಮಂಗಳವಾರ ಬೆಳಿಗ್ಗೆಯಿಂದ ಪುನರಾರಂಭಗೊಂಡಿದೆ.
ರಾಜಧಾನಿ ಜಕಾರ್ತದ ಸೋಕರ್ನೊ-ಹಟ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹಲೀಮ್ ಪೆರ್ದನಕುಸುಮಾ ವಿಮಾನ ನಿಲ್ದಾಣ, ಪಶ್ಚಿಮ ಜಾವಾದ ಬಂಡಂಗ್ ನಗರದ ಹುಸೇನ್ ಶಾಸ್ತ್ರನೆಗರ ವಿಮಾನ ನಿಲ್ದಾಣ ಮತ್ತು ಬಾಂಟೆನ್ ಪ್ರಾಂತ್ಯದ ಎರಡು ಸಣ್ಣ ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾರಂಭ ಮಾಡಿವೆ ಎಂದು ಸಾರಿಗೆ ಸಚಿವ ಡುಡಿ ಪೂರ್ವಗಂಧಿ ತಿಳಿಸಿದ್ದಾರೆ.
ಸುಮಾತ್ರಾ ದ್ವೀಪದ ದಕ್ಷಿಣ ತುದಿಯಲ್ಲಿರುವ ಲ್ಯಾಂಪಂಗ್‌ನಲ್ಲಿರುವ ರಾಡಿನ್ ಇಂಟೆನ್ 2 ವಿಮಾನ ನಿಲ್ದಾಣ ಸೇರಿದಂತೆ ಇತರ ಮೂರು ವಿಮಾನ ನಿಲ್ದಾಣಗಳು ಬೆಳಿಗ್ಗೆ 10 ಗಂಟೆಯವರೆಗೆ (ಸ್ಥಳೀಯ ಕಾಲಮಾನ) ಮುಚ್ಚಿದ್ದವು.
ದಕ್ಷಿಣ ಸುಮಾತ್ರಾ ಪ್ರಾಂತ್ಯದ ಪಗರ್ ಅಲಂನಲ್ಲಿರುವ ಅತುಂಗ್ ಬಂಗ್ಸು ವಿಮಾನ ನಿಲ್ದಾಣವು ಸೋಮವಾರ ಬೆಳಿಗ್ಗೆ ಸಾಮಾನ್ಯ ಕಾರ್ಯಾಚರಣೆಯನ್ನು ಪುನರಾರಂಭಿಸಿತ್ತು.
ಶನಿವಾರ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ವಿಮಾನ ನಿಲ್ದಾಣಗಳು ಮುಚ್ಚಿದ್ದರಿಂದ 622 ಅಂತರರಾಷ್ಟ್ರೀಯ ವಿಮಾನಗಳು ಸೇರಿ 2,961 ವಿಮಾನಗಳ ಹಾರಾಟ ರದ್ದುಗೊಂಡಿತ್ತು. 3.41 ಲಕ್ಷ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು.

