ನ್ಯೂಯಾರ್ಕ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಗುರುವಾರ ವಿಶ್ವಸಂಸ್ಥೆಯ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಯಹೂದಿ ವಿರೋಧಿ ಧೋರಣೆ ಹಾಗೂ ಇಸ್ರೇಲ್ ಮೇಲಿನ ಟೀಕೆಗಳು ನ್ಯೂಯಾರ್ಕ್‌ನ ಯಹೂದಿ ಸಮುದಾಯವನ್ನು ಅಭದ್ರತೆಗೆ ತಳ್ಳಿವೆ.
ಮಮ್ದಾನಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿನ ಯಹೂದಿಗಳಿಗೆ ಸುರಕ್ಷತೆಯ ಭಾವನೆ ಇಲ್ಲದಂತಾಗಿದೆ ಎಂದು ಮಮ್ದಾನಿ ವಿರುದ್ಧ ಹರಿಹಾಯ್ದರು.
ಪ್ಯಾಲೆಸ್ಟೀನಿಯನ್ನರ ಮೇಲಿನ ಇಸ್ರೇಲ್ ದೌರ್ಜನ್ಯವನ್ನು ಕಟುವಾಗಿ ಟೀಕಿಸುತ್ತಿರುವ ಮಮ್ದಾನಿ, ನೇತನ್ಯಾಹು ಅವರನ್ನು 'ಯುದ್ಧ ಅಪರಾಧಿ' ಎಂದು ಕರೆದಿದ್ದರು.
ನೇತನ್ಯಾಹು ತಮ್ಮ 37 ನಿಮಿಷಗಳ ಭಾಷಣದಲ್ಲಿ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವು ನರಮೇಧಕ್ಕೆ ಸಮಾನ ಎಂಬ ಮಮ್ದಾನಿ ಅವರ ಹೇಳಿಕೆಯನ್ನು ಖಂಡಿಸಿದ ಅವರು ಇಸ್ರೇಲ್ ಮೇಲೆ ನರಮೇಧದ ಆರೋಪ ಹೊರಿಸುವುದು ಈ ಶತಮಾನದ ಅತಿ ದೊಡ್ಡ ಸುಳ್ಳು ಎಂದು ಹೇಳಿದರು.
ಮಮ್ದಾನಿ ತಿರುಗೇಟು: ನೇತನ್ಯಾಹು ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಮೇಯರ್ ಮಮ್ದಾನಿ, 'ತಮ್ಮ ನರಮೇಧವನ್ನು ಮುಚ್ಚಿಹಾಕಲು ಪ್ರಧಾನಿ ವಿಶ್ವಸಂಸ್ಥೆಯ ವೇದಿಕೆಯನ್ನು ಸುಳ್ಳು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ 'ಯುದ್ಧ ಅಪರಾಧದ ವಾರಂಟ್' ಎದುರಿಸುತ್ತಿರುವ ವ್ಯಕ್ತಿ ಎಂಬ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

