ನವದೆಹಲಿ: ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ವರದಿಯಾಗುತ್ತಿರುವ ಪುನರಾವರ್ತಿತ ಲೈಂಗಿಕ ಅಪರಾಧ ಪ್ರಕರಣಗಳು 2012ರ ನಿರ್ಭಯಾ ಪ್ರಕರಣದ ಕಹಿ ನೆನಪಿಸುವಂತಿದೆ ಎಂದು ಸುಪ್ರೀಂ ಕೋರ್ಟ್ ಬೇಸರ ಹೊರಹಾಕಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿನೋದ ಚಂದ್ರನ್ ಅವರನ್ನೊಳಗೊಂಡ ಪೀಠವು ರಾಷ್ಟ್ರ ರಾಜಧಾನಿ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ದೆಹಲಿ ಆಸ್ತಾಕುಂಜ್ ಉದ್ಯಾನದಲ್ಲಿ ಕೂತಿದ್ದ 17 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಚಲಿಸುವ ಸ್ಲೀಪರ್ ಬಸ್ನಲ್ಲಿ ಹದಿಹರೆಯದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ನ್ಯಾಯಪೀಠ ಆದೇಶಿಸಿದೆ.
ದೆಹಲಿ-ಎನ್ಸಿಆರ್ನಲ್ಲಿ ನಡೆದ ಇತ್ತೀಚಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು 2012ರಲ್ಲಿ ದೆಹಲಿಯಲ್ಲಿಯೇ ನಡೆದಿದ್ದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಿವೆ. ಕಳೆದೊಂದು ದಶಕದಲ್ಲಿ ಕಾನೂನು ಜಾರಿ ಕಾರ್ಯವಿಧಾನಗಳು ಅರ್ಥಪೂರ್ಣ ಪ್ರಗತಿ ಸಾಧಿಸಿವೆಯೇ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ದೆಹಲಿ-ಎನ್ಸಿಆರ್ನಲ್ಲಿನ ಅತ್ಯಾಚಾರ ಪ್ರಕರಣಗಳ ಕುರಿತಾದ ವರದಿಗಳು ಕಾನೂನು ಜಾರಿ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ವ್ಯವಸ್ಥಿತ ವೈಫಲ್ಯವನ್ನು ಸ್ಪಷ್ಟವಾಗಿ ಒತ್ತಿಹೇಳುತ್ತಿವೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಪರಾಧ ತಡೆಗಟ್ಟುವುದು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಮತ್ತು ದುರ್ಬಲ ವ್ಯಕ್ತಿಗಳನ್ನು ರಕ್ಷಿಸುವ ಹೊಣೆ ಹೊತ್ತಿರುವ ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿಯನ್ನು ನಿಗದಿಪಡಿಸುವ ಅಗತ್ಯತೆ ಎದುರಾಗಿದೆ ಎಂದು ಕೋರ್ಟ್ ಹೇಳಿದೆ.
ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದಿರುವುದು, ಅಸಮರ್ಪಕ ಕಣ್ಗಾವಲು ಸೇರಿದಂತೆ ಇತರ ಆಡಳಿತಾತ್ಮಕ ಲೋಪಗಳಿಂದಾಗಿ ಉದ್ಯಾನವನ ಮತ್ತು ಬಸ್ಗಳಂತಹ ಸಾರ್ವಜನಿಕ ಸ್ಥಳಗಳು ತೀವ್ರ ಅಪಾಯಕಾರಿ ವಲಯಗಳಾಗಲು ಬಿಡಬಾರದು ಎಂದು ನ್ಯಾಯಪೀಠ ಹೇಳಿದೆ.
ಸಾರ್ವಜನಿಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವ್ಯಕ್ತಪಡಿಸುವ ಕಳವಳದ ಹೇಳಿಕೆಗಳು ಅರ್ಥವಾಗುವಂತಹದ್ದಾಗಿದ್ದರೂ, ಅದಕ್ಕೆ ತಕ್ಕಂತೆ ಜವಾಬ್ದಾರಿಯನ್ನು ನಿಗದಿಪಡಿಸದಿದ್ದರೆ ಅದು ವ್ಯರ್ಥವಾಗುತ್ತದೆ ಎಂದೂ ನ್ಯಾಯಪೀಠ ತಿಳಿಸಿದೆ.
ಆಗಸ್ಟ್ 4ರಂದು ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ತೀವ್ರ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಸಹಾಯ ಕೇಳಿದ 16 ವರ್ಷದ ಬಾಲಕಿಯ ಮೇಲೆ ಚಲಿಸುವ ಸ್ಲೀಪರ್ ಬಸ್ನಲ್ಲಿ ಚಾಲಕ ಮತ್ತು ಕಂಡಕ್ಟರ್ ಅತ್ಯಾಚಾರ ಎಸಗಿದ್ದರು. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 21ರಂದು ದಕ್ಷಿಣ ದೆಹಲಿಯ ಉದ್ಯಾನದಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

