ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯುವ ಮಧ್ಯಂತರ ಚುನಾವಣೆ ಬಳಿಕ ಇರಾನ್ ಮೇಲೆ ಮತ್ತೆ ದಾಳಿ ಆರಂಭವಾಗುವ ಸಾಧ್ಯತೆ ಇದೆ.
ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್ ಇಟ್ಟಿರುವ ಪ್ರಸ್ತಾವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ 'ವಾಲ್ ಸ್ಟ್ರೀಟ್ ಜರ್ನಲ್' ಪತ್ರಿಕೆ ವರದಿ ಮಾಡಿದೆ.
ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬಂದಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, 'ಅಮೆರಿಕವು ಕೆಲವು ಷರತ್ತುಗಳಿಗೆ ಒಪ್ಪಿದರೆ 7 ದಿನಗಳಲ್ಲಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ನಿಲ್ಲಿಸಿ, ಹೊರ್ಮುಜ್ ಜಲಮಾರ್ಗವನ್ನು ತೆರೆಯುತ್ತೇವೆ. ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲೂ ಮಾತುಕತೆ ಪ್ರಾರಂಭಿಸಲಾಗುವುದು' ಎಂದು ಮಾಧ್ಯಮಗಳಿಗೆ ಹೇಳಿದ್ದರು.
ಅವರು ಅದೇ ಮಾತನ್ನು, ವಿಶ್ವಸಂಸ್ಥೆಯಲ್ಲಿಯೂ ಪುನರುಚ್ಚರಿಸಿದ್ದಾರೆ. 'ಅಮೆರಿಕಕ್ಕೆ ಕತಾರ್ ಮೂಲಕ ಏಳು ಪ್ರಸ್ತಾವ ಕಳುಹಿಸಲಾಗಿದೆ. ಅಗತ್ಯ ಷರತ್ತುಗಳನ್ನು ಪೂರೈಸಿದರೆ ಏಳು ದಿನಗಳ ಒಳಗೆ ಜಲಮಾರ್ಗವನ್ನು ಮತ್ತೆ ತೆರೆಯಬಹುದು. ಹಡಗು ಸಂಚಾರ ಪುನರಾರಂಭಿಸಬಹುದು' ಎಂದು ಎಂದಿದ್ದಾರೆ.
'ಟ್ರಂಪ್ ಜಲಮಾರ್ಗ'
ಏತನ್ಮಧ್ಯೆ, ಟ್ರಂಪ್ ಅವರು ತಮ್ಮದೇ ಒಡೆತನದ ಟ್ರುತ್ ಸೋಷಿಯಲ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಗಮನ ಸೆಳೆದಿದೆ.
ಪಶ್ಚಿಮ ಏಷ್ಯಾ ಪ್ರದೇಶದ ನಕ್ಷೆಯಲ್ಲಿ ಹೊರ್ಮುಜ್ ಜಲಸಂಧಿ ಇರುವ ಭಾಗವನ್ನು ಗುರುತಿಸಿ, ಅದಕ್ಕೆ 'ಟ್ರಂಪ್ ಜಲಮಾರ್ಗ' ಎಂಬ ಹೆಸರು ನೀಡಿದ್ದಾರೆ.
ಯುದ್ಧ ಕೊನೆಗೊಳಿಸುವುದು, ಹೊರ್ಮುಜ್ ಮಾರ್ಗವನ್ನು ಹಡಗು ಸಂಚಾರಕ್ಕೆ ಮುಕ್ತಗೊಳಿಸುವುದು ಮತ್ತು ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ಆರಂಭಿಸುವುದಕ್ಕೆ ಸಂಬಂಧಿಸಿದ ತಿಳುವಳಿಕೆಗೆ ಎರಡೂ ರಾಷ್ಟ್ರಗಳು ಜೂನ್‌ನಲ್ಲಿ ಸಹಿ ಹಾಕಿದ್ದವು. ಆದರೆ, ಹೊರ್ಮುಜ್‌ನಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ, ಒಪ್ಪಂದ ಮುರಿದುಬಿದ್ದಿದೆ.

