ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ, ಕಾಸರಗೋಡು, ಸಿರಿಗನ್ನಡ ವೇದಿಕೆ ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಮಕ ಶ್ರಾವಣ ಸರಣಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಅಧ್ಯಾಪಕ ವಿ.ಬಿ ಕುಳಮರ್ವ ವಹಿಸಿದ್ದರು. ಅವರು ಗಮಕ ಕಲೆ ಪಂಡಿತ ಪಾಮರ ಎಂಬ ಕಂದಕವನ್ನು ಇಲ್ಲದೆ ಮಾಡುವ ಸಂಪರ್ಕ ಸೇತುವಾಗಿದ್ದು, ನಡುಗನ್ನಡ ಸಾಹಿತ್ಯದ ಹಿರಿಮೆಯನ್ನು ಪಸರಿಸಿದ ಅಪೂರ್ವ ಕಲೆಯಾಗಿದೆ. ಯುವ ಪೀಳಿಗೆಗೆ ಗಮಕದ ಮಹತ್ವವನ್ನು ಪರಿಚಯಿಸಲು ಸರಣಿ ಕಾರ್ಯಕ್ರಮ ಸಹಾಯಿ ಎಂದು ಅಭಿಪ್ರಾಯ ಪಟ್ಟರು.
ಶಾಲಾ ಪ್ರವಂಧಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಉನ್ನತ ಪ್ರೌಢಶಾಲಾ ಪ್ರಾಂಶುಪಾಲ ರಮೇಶ ಕೆ.ಎನ್., ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಮೃದುಲಾ ಕೆ.ಎಂ. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ. ಪಿ ನಾರಾಯಣ ಮೂಡಿತ್ತಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ವಿದ್ಯಾವರ್ಧಕ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು. ವಿದ್ಯಾರ್ಥಿನಿಯರಾದ ಅನುಷಾ ಮತ್ತು ಸಾನಿಧ್ಯ ಅವರು ಹಾಸನದ ಪ್ರೊ. ನರಹರಿ ಅವರು ಬರೆದ ಕಾವ್ಯ ಭಾಗವನ್ನು ವಾಚನ ವ್ಯಾಖ್ಯಾನ ಮಾಡಿದರು. ವಿದ್ಯಾರ್ಥಿಗಳಾದ ಅನಿರುದ್ಧ ಸ್ವಾಗತಿಸಿ, ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಿನ್ ಕುಮಾರ್ ವಂದಿಸಿದರು.

.jpg)
