ಕಾಸರಗೋಡು: ಶ್ವಾನ ಹಾಗೂ ಇತರ ಪ್ರಾಣಿಗಳಿಂದ ಜನರ ಜೀವಕ್ಕೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದವರನ್ನು ಶಾಸಕ ಕಲ್ಲಟ್ರ ಮಾಹಿನ್ ಭೇಟಿಯಾಗಿ ಮಾತುಕತೆನಡೆಸಿದರು.
ಬಿಜೆಪಿ ಸದಸ್ಯೆಯರಾದ ಶ್ರೀವಿದ್ಯಾ, ವಸಂತಿ, ಮಲ್ಲಿಕ, ಪ್ರಮೀಳ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ವಿವಿಧೆಡೆ ವ್ಯಾಪಕವಾಗಿ ಅಲೆದಾಡುತ್ತಿರುವ ಜಾನುವಾರುಗಳನ್ನು ಪಂಚಾಯತ್‍ನ ದೊಡ್ಡಿಯೊಳಗೆ ಬಿಗಿಯುವ ವ್ಯವಸ್ಥೆ ಮಾಡಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿ ಹುಚ್ಚು ನಾಯಿಗಳ ಹಾಗೂ ಜಾನುವಾರುಗಳ ಉಪಟಳ ಕುರಿತು ಧ್ವನಿವರ್ಧಕ ಮೂಲಕ ಜನರಿಗೆ ತಿಳಿಸಿ ಜಾಗೃತಿ ಮೂಡಿಸಬೇಕು, ಪಂಚಾಯಿತಿ ಆಡಳಿತ ಸಮಿತಿ ಕೈಗೊಳ್ಳುವ ನಿರ್ಧಾರಗಳನ್ನು ಗೌಪ್ಯವಾಗಿಡುವ ಪಂಚಾಯಿತಿ ಕಾರ್ಯದರ್ಶಿಯನ್ನು ನಿಯಂತ್ರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಜನರು ಜಾಗ್ರತೆ ಪಾಲಿಸುವಂತೆ ಧ್ವನಿವರ್ಧಕ ಮೂಲಕ ಘೋಷಣೆ ಆರಂಭಿಸುವ ವರೆಗೆ ಸತ್ಯಾಗ್ರಹ ಮುಂದುವರಿಸುವುದಾಗಿ ಚಳವಳಿ ನಿರತರು ತಿಳಿಸಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಹುಚ್ಚು ನಾಯಿಗಳ ಕಡಿತಕ್ಕೊಳಗಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಸತ್ಯಾಗ್ರಹ ನಿರತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಲು ಪಂಚಾಯಿತಿ ವತಿಯಿಂದ ತುರ್ತು ಕ್ರಮ ಕೈಗೊಂಡು ಶೀಘ್ರ ತಿಳುವಳಿಕೆ ಕಾರ್ಯಕ್ರಮ ನಡೆಸುವಂತೆ ಚಳವಳಿ ನಿರತರು ಒತ್ತಾಯಿಸಿದ್ದಾರೆ.

