ನವದೆಹಲಿ: ತನ್ನ ಕುರಿತು ಮಾಡುವ ಟೀಕೆಗೆ ನ್ಯಾಯಾಂಗ ವಿಮುಖವಾಗಿಲ್ಲ. ಟೀಕಿಸುವುದನ್ನು ವಿರೋಧ ಮಾಡಲೂಬಾರದು. ಆದರೆ, ಸೂಕ್ತ ವೇದಿಕೆ ಮೂಲಕ ಹಾಗೂ ನ್ಯಾಯಸಮ್ಮತ ಮಾರ್ಗದಲ್ಲಿ ಇಂತಹ ಟೀಕೆ ವ್ಯಕ್ತವಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎನ್‌ಸಿಇಆರ್‌ಟಿಯ 8ನೇ ತರಗತಿ ಪಠ್ಯಪುಸ್ತಕದಲ್ಲಿ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಕುರಿತ ಅಧ್ಯಾಯಕ್ಕೆ ಸಂಬಂಧಿಸಿ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣವನ್ನು ಮುಕ್ತಾಯ ಗೊಳಿಸಿ, ಆದೇಶ ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಹಾಗೂ ವಿ.ಮೋಹನಾ ಅವರು ಇದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿ, ಈ ಕುರಿತು ಸೆಪ್ಟೆಂಬರ್ 1ರಂದು ಆದೇಶಿಸಿದೆ.
'ಒಂದು ಸಂಸ್ಥೆಯಾಗಿರುವ ನ್ಯಾಯಾಂಗ ಎಂದಿಗೂ ಟೀಕೆಗೆ ವಿಮುಖವಾಗ ಬಾರದು. ನ್ಯಾಯಾಂಗದ ಕಾರ್ಯವೈಖರಿ ಕುರಿತು ರಚನಾತ್ಮಕ ಟೀಕೆ ಅಗತ್ಯ. ಇದು, ಸಂವಿಧಾನದಡಿ ಕಾರ್ಯನಿರ್ವಹಿಸುವ ಪ್ರಜಾತಂತ್ರ ವ್ಯವಸ್ಥೆಯ ಗುಣಲಕ್ಷಣವೂ ಆಗಿದೆ. ಇದರಿಂದ ಉತ್ತರದಾಯಿತ್ವ ಹಾಗೂ ತನ್ನ ಕಾರ್ಯನಿರ್ವಹಣೆಯಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ನ್ಯಾಯಾಂಗಕ್ಕೆ ಸಾಧ್ಯವಾಗಲಿದೆ' ಎಂದು ಪೀಠ ಹೇಳಿದೆ.
'ನ್ಯಾಯಾಂಗ ಕುರಿತು ಟೀಕೆ ವ್ಯಕ್ತಪಡಿಸುವುದಕ್ಕೆ ವಿವೇಚನೆಯಿಂದ ಕೂಡಿದ ವಿಧಾನ ಬಳಸಬೇಕು. ಯಾವುದೇ ಪರಿಶೀಲನೆ ಇಲ್ಲದೆಯೇ ಶಾಲಾ ಪಠ್ಯಕ್ರಮದಲ್ಲಿ ಈ ವಿಷಯ ಕುರಿತು ಪಾಠ ಸೇರಿಸಿದ್ದು ಸರಿಯಲ್ಲ' ಎಂದೂ ಹೇಳಿದೆ.
ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯು ಸೂಚಿಸಿದ ಸಲಹೆಗಳ ಆಧಾರದಲ್ಲಿ ಪಠ್ಯಪುಸ್ತಕವನ್ನು ಪರಿಷ್ಕರಿಸಿ, ವಿವಾದಾತ್ಮಕ ಪಾಠವನ್ನು ತೆಗೆದು ಹಾಕಲಾಗಿದೆ ಎಂಬ ಅಂಶವನ್ನು ಪೀಠ ಪರಿಗಣನೆಗೆ ತೆಗೆದುಕೊಂಡಿತು.
'ವಿವಾದಾತ್ಮಕ ಅಂಶಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ್ದರ ಕುರಿತು ಸುಪ್ರೀಂ ಕೋರ್ಟ್ ಕಟುವಾದ ಟೀಕೆ ಮಾಡಿತ್ತು. ಪಾಠದಲ್ಲಿನ ವಿಷಯವಸ್ತುವಿನ ಆಧಾರದಲ್ಲಿ ಇಂತಹ ಟೀಕೆ ಮಾಡಲಾಗಿತ್ತೇ ಹೊರತು ಯಾವುದೇ ವ್ಯಕ್ತಿಗಳನ್ನು ಉದ್ದೇಶಿಸಿ ಅಲ್ಲ' ಎಂದ ಸ್ಪಷ್ಟಪಡಿಸಿದೆ.

