HEALTH TIPS

SIR ಕುರಿತು ಏಕಪಕ್ಷೀಯ ನಿರ್ಧಾರ: ಚುನಾವಣಾ ಆಯೋಗದ ಆಯುಕ್ತರ ಮಧ್ಯೆ ಬಿಕ್ಕಟ್ಟು?

ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿಷಯಕ್ಕೆ ಸಂಬಂಧಿಸಿದಂತೆ, ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಇತರ ಇಬ್ಬರು ಆಯುಕ್ತರ ನಡುವೆ ಆಂತರಿಕ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಆರೋಪಗಳು ಬಂದಿವೆ.  


ಆಯೋಗದ ಮುಖ್ಯ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರು ತೆಗೆದುಕೊಂಡ ನಿರ್ಧಾರಗಳು ಏಕಪಕ್ಷೀಯವಾಗಿವೆ ಎಂದು, ಉಳಿದಿಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌

ಜೋಶಿ ತೀವ್ರ ಆಕ್ಷೇಪಗಳನ್ನು ಎತ್ತಿದ್ದಾರೆ ಎಂದು ಇಂಗ್ಲಿಷ್‌ ದೈನಿಕ 'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ವರದಿ ಬೆನ್ನಲ್ಲೇ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷಗಳು, ಸಿಇಸಿ ಅವರನ್ನು ಪದಚ್ಯುತಗೊಳಿಸಲು ಮತ್ತು ಎಸ್‌ಐಆರ್‌ ಅನ್ನು ರದ್ದುಗೊಳಿಸಲು ಆಗ್ರಹಿಸಿವೆ. ಅಲ್ಲದೆ,

ಬಹುಮತವಿಲ್ಲದೆ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಧಾರಗಳು ಕಾನೂನುಬಾಹಿರ ಎನಿಸಿಕೊಳ್ಳುತ್ತವೆ ಎಂದೂ ಹೇಳಿವೆ. ಆದರೆ ಈ ಕುರಿತ ಆರೋಪಗಳನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ.

10 ತಿಂಗಳಲ್ಲಿ 14 ಬಾರಿ ಆಕ್ಷೇಪ: ದೇಶವ್ಯಾಪಿ ಎಸ್‌ಐಆರ್‌ ಅನುಷ್ಠಾನದ ವಿಚಾರದಲ್ಲಿ ತಮ್ಮ ಗಮನಕ್ಕೆ ಬಾರದೆ ಕೈಗೊಂಡ ಕೆಲ ನಿರ್ಧಾರಗಳು ಮತ್ತು ಹೊರಡಿಸಿದ ಆದೇಶಗಳಿಗೆ ಸಂಬಂಧಿಸಿದಂತೆ ಸಂಧು ಮತ್ತು ಜೋಶಿ ಅವರು ಅಸಮಾಧಾನಗೊಂಡಿದ್ದರು. ಈ ಸಂಬಂಧ ಅವರಿಬ್ಬರು ಕಳೆದ 10 ತಿಂಗಳಲ್ಲಿ 14 ಬಾರಿ (ಒಂದೇ ದಿನ ನಾಲ್ಕು ಸಾರಿ) ಅಧಿಕೃತವಾಗಿ ಆಕ್ಷೇಪಗಳನ್ನು ದಾಖಲಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಆಕ್ಷೇಪಗಳೇನು?: ಹೊಸ ಮತದಾರರ ನೋಂದಣಿ, ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು, ಸೇರಿಸುವುದು, ಮತದಾರರ ಪಟ್ಟಿಯ ಸಂಪೂರ್ಣ ನಿರ್ವಹಣೆ ಮತ್ತು ಭದ್ರತೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರೂ ಆಯುಕ್ತರು ಆಕ್ಷೇಪಗಳನ್ನು ಎತ್ತಿದ್ದಾರೆ.

ಮತದಾರರ ದತ್ತಾಂಶ ನಿರ್ವಹಣೆಯ ತಂತ್ರಜ್ಞಾನ ವ್ಯವಸ್ಥೆಯನ್ನು ದೆಹಲಿಯಿಂದಲೇ ಕೇಂದ್ರೀಕೃತವಾಗಿ ನಿರ್ವಹಿಸುವ ಕುರಿತು ಆಕ್ಷೇಪಿಸಿ ಅವರು ಸಂಪುಟ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.

ತಮ್ಮನ್ನು ಕತ್ತಲೆಯಲ್ಲಿಟ್ಟು ಕೆಲ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ನಮೂನೆ-6ರಲ್ಲಿನ ಬದಲಾವಣೆಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಆಕ್ಷೇಪಗಳನ್ನು ನಿರ್ಲಕ್ಷಿಸಿ ತೆಗೆದುಕೊಂಡ ನಿರ್ಧಾರಗಳನ್ನು ಆಯೋಗದ ಸರ್ವಾನುಮತದ ನಿರ್ಧಾರ ಎಂದು ಜಾರಿಗೊಳಿಸಿರುವುದರ ವಿರುದ್ಧವೂ ಅವರು ಧ್ವನಿಯೆತ್ತಿದ್ದಾರೆ. ಆಯೋಗ ತೆಗೆದುಕೊಂಡ ಕೆಲವು ಉಪಕ್ರಮಗಳ ಬಗ್ಗೆ ತಮಗೆ ಮಾಧ್ಯಮಗಳ ಮೂಲಕ ತಿಳಿಯಿತು ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸರ್ವಾನುಮತದ ನಿರ್ಧಾರ: ಸಮರ್ಥನೆ

ಭಿನ್ನಾಭಿಪ್ರಾಯಗಳ ಕುರಿತು ತೀವ್ರ ವಿವಾದ ಉಂಟಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಆಯೋಗ, 'ಯಾವುದೇ ಸಂಸ್ಥೆಯಲ್ಲಿ ಚರ್ಚೆಗಳ ವೇಳೆಯಲ್ಲಿ ಭಿನ್ನಾಭಿಪ್ರಾಯ ಮೂಡುವುದು ಸಹಜ. ಅದು ಪ್ರಕ್ರಿಯೆಯ ಭಾಗ. ಆದರೆ ಕಳೆದ ಒಂದು ವರ್ಷದಲ್ಲಿ ಕೈಗೊಂಡ ಎಲ್ಲ ನಿರ್ಧಾರಗಳು ಸರ್ವಾನುಮತ ದಿಂದ ಕೂಡಿದ್ದವು' ಎಂದು ಸಮರ್ಥಿಸಿಕೊಂಡಿದೆ.

'ಮೂವರು ಆಯುಕ್ತರಷ್ಟೇ ಅಲ್ಲದೆ, ಚುನಾವಣಾ ವ್ಯವಸ್ಥೆ ಸುಧಾರಿಸುವ ಕುರಿತು ಸಲಹೆಗಳನ್ನು ನೀಡಲು ಆಯೋಗದ ಪ್ರತಿ ಅಧಿಕಾರಿಯೂ ಪೂರ್ಣ ಅಧಿಕಾರ ಹೊಂದಿರುತ್ತಾರೆ' ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ 10 ತಿಂಗಳುಗಳಲ್ಲಿನ ಕೆಲವು ನಿರ್ದಿಷ್ಟ ಆಂತರಿಕ ಟಿಪ್ಪಣಿಗಳನ್ನು ಮಾತ್ರ ಮಾಧ್ಯಮ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಆದರೆ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ

ಅನುಮೋದನೆಗಳು, ನಿರ್ಧಾರಗಳು, ಸೂಚನೆಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು

ಕಡೆಗಣಿಸಲಾಗಿದೆ. ಈ ಮೂಲಕ, ಒಂದು ಚಿತ್ರಣವನ್ನಷ್ಟೇ ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಆಯೋಗವು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ, ಸೂಚನೆಗಳನ್ನು ನೀಡಿದೆ, ಸುಮಾರು 40 ಹೊಸ ಉಪಕ್ರಮಗಳನ್ನು ಪರಿಚಯಿಸಿದೆ, ದೇಶದಾದ್ಯಂತ ಎಸ್‌ಐಆರ್‌ ಸೇರಿದಂತೆ ಅನೇಕ ಚುನಾವಣಾ ಸುಧಾರಣೆಗಳನ್ನು ಕೈಗೊಂಡಿದೆ. ಇವುಗಳನ್ನೆಲ್ಲಾ ಸರ್ವಾನುಮತದ ನಿರ್ಧಾರದ ಮೂಲಕವೇ ತೆಗೆದುಕೊಂಡಿದೆ ಎಂದು ಅದು ಸ್ಪಷ್ಟಪಡಿಸಿದೆ.

'ಇಸಿಐಎನ್‌ಇಟಿ ಅಂತಹ ಡಿಜಿಟಲ್‌ ವೇದಿಕೆಗಳು ಕಟ್ಟುನಿಟ್ಟಾದ ದತ್ತಾಂಶ ಭದ್ರತಾ ಶಿಷ್ಟಾಚಾರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ' ಎಂದು ಅದು ದತ್ತಾಂಶದ ಮೇಲಿನ ಆಯೋಗದ ಐಟಿ ತಂಡದ ನಿಯಂತ್ರಣ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದೆ.

'ಕರಡು ಹಂತಗಳಲ್ಲಿ ಚುನಾವಣಾ ಆಯುಕ್ತರು ಎತ್ತುವ ಯಾವುದೇ ಪ್ರಶ್ನೆಗಳು ಮತದಾರರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುತ್ತವೆ. ಅಲ್ಲದೆ, ಅವರು ನೀಡುವ ಸಲಹೆಗಳು ಚುನಾವಣಾ ಪ್ರಕ್ರಿಯೆಗಳನ್ನು ಇನ್ನಷ್ಟು ಸುಧಾರಿಸುವ ಉದ್ದೇಶ ಹೊಂದಿರುತ್ತವೆ' ಎಂದೂ ಅದು ಸಮರ್ಥಿಸಿಕೊಂಡಿದೆ.

ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ

ನವದೆಹಲಿ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಭಾರತೀಯ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡುವ 2023ರ ತಿದ್ದುಪಡಿ ಕಾನೂನಿನ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ

ನ್ಯಾಯಮೂರ್ತಿಗಳು ಇದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕುರಿತು ಸಹಮತ ವ್ಯಕ್ತಪಡಿಸಿದರು.

ನ್ಯಾಯಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು, ಕೇಂದ್ರ ಸರ್ಕಾರದ ಸಲ್ಲಿಕೆಯನ್ನು ಸ್ವೀಕರಿಸಲು ನಿರಾಕರಿಸಿದರು.

ಆಯ್ಕೆ ಪ್ರಕ್ರಿಯೆಯ ಸ್ವಾಯತ್ತತೆ ಬಗ್ಗೆ ಕಳವಳ

ವ್ಯಕ್ತಪಡಿಸಿದರು. 'ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯು ಸ್ವತಂತ್ರ ಚುನಾವಣಾ ಆಯೋಗವನ್ನು ಅವಲಂಬಿಸಿದೆ. ಆಯೋಗವು ಸ್ವತಂತ್ರವಾಗಿರುವುದು ಮಾತ್ರವಲ್ಲ, ಅದು ಮುಕ್ತವಾಗಿ ಕಾರ್ಯನಿರ್ವಹಿಸುವುದೂ ಮೇಲ್ನೋಟಕ್ಕೆ ಕಾಣಬೇಕು' ಎಂದು ಅವರು ಹೇಳಿದರು.

ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕಮತಗಳ್ಳತನಕ್ಕೆ ಕಾರಣರಾದ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಚುನಾವಣಾ ಆಯೋಗ ದವರು ದೇಶದ್ರೋಹದ ಕೃತ್ಯ ಎಸಗಿದ್ದಾರೆಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ ಮೂವರು ಚುನಾವಣಾ ಆಯುಕ್ತರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು, ಆಯೋಗವು ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ತೋರಿಸುತ್ತವೆ 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries